ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಬಿಜೆಪಿ ವೋಟ್ ಕಳ್ಳತನ ನಡೆಸುತ್ತಿದೆ ಎಂಬ ಕಾಂಗ್ರೆಸ್‌ನ ಆರೋಪವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ‘ವೋಟ್ ಚೋರಿ’ ವಿರುದ್ಧ ಕಹಳೆ ಮೊಳಗಿಸಿದೆ. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹಾಗೂ ಸಂಸದ ಪ್ರಲ್ಹಾದ್ ಜೋಶಿ ಅವರು, ಕಾಂಗ್ರೆಸ್‌ಗೆ ತೀಕ್ಷ್ಣವಾದ ವ್ಯಂಗ್ಯದ ತಿರುಗೇಟು ನೀಡಿದ್ದಾರೆ.
ಜೋಶಿ ಅವರು, “ಮತಗಳ್ಳತನವಾಗಿಲ್ಲ, ಬದಲಿಗೆ ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ,” ಎಂದು ಟೀಕಿಸಿದರು.
ಮತಗಳ್ಳತನ ಆರೋಪಗಳ ಕುರಿತು ಮಾತನಾಡಿದ ಜೋಶಿ, ಕಾಂಗ್ರೆಸ್ ಪಕ್ಷವು ಮೊದಲು ಆಂತರಿಕ ತನಿಖೆ ನಡೆಸಬೇಕು. ಅದು ನಡೆಯುವವರೆಗೂ ಪಕ್ಷದೊಳಗೆ ಯಾವುದನ್ನೂ ಸರಿಪಡಿಸಲು ಸಾಧ್ಯವಿಲ್ಲ. “ಮತಗಳ್ಳತನ ನಡೆದಿಲ್ಲ, ರಾಹುಲ್ ಗಾಂಧಿ ಮತ್ತು ಅವರ ಬೆಂಬಲಿಗರ ಮೆದುಳು ಕಳ್ಳತನವಾಗಿದೆ,” ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ದೇಶಾದ್ಯಂತ ‘ಮತಗಳ್ಳತನ’ ನಡೆಯುತ್ತಿದೆ ಎಂದು ಆರೋಪಿಸಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿದೆ. ದೆಹಲಿಯಲ್ಲಿ ನಡೆದ ಈ ಸಮಾವೇಶದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಭಾಗವಹಿಸಿದ್ದಾರೆ. ಎರಡು ದಿನಗಳ ಅವಧಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

