Friday, December 19, 2025

Viral | ಮೈಲಿಗಳ ದೂರ ಮೀರಿತು ಪ್ರೀತಿ: ತಂತ್ರಜ್ಞಾನದ ಮೂಲಕ ಬಂಧ ಗಟ್ಟಿಗೊಳಿಸಿದ ವಿಶಿಷ್ಟ ನಿಶ್ಚಿತಾರ್ಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸದ ಒತ್ತಡ, ರಜೆ ಅಭಾವದಿಂದಾಗಿ ಪ್ರೀತಿಪಾತ್ರರ ಕಾರ್ಯಕ್ರಮಗಳಿಗೂ ಹಾಜರಾಗಲು ಸಾಧ್ಯವಾಗದಿರುವುದು ಇತ್ತೀಚಿನ ಸಾಮಾನ್ಯ ಸಂಗತಿಯಾಗಿದೆ. ಆದರೆ, ಉಡುಪಿಯಲ್ಲಿ ನಡೆದಿರುವ ಒಂದು ಅಪರೂಪದ ಪ್ರಸಂಗ ಅಚ್ಚರಿ ಮೂಡಿಸಿದೆ. ಇಲ್ಲಿ, ನಿಶ್ಚಿತಾರ್ಥಕ್ಕೆ ಬರಲು ಸಾಧ್ಯವಾಗದ ಕಾರಣ, ವಧು-ವರರು ಆನ್‌ಲೈನ್‌ನಲ್ಲೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ!

ಬೆಂಗಳೂರು ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಸುಹಾಸ್ ಎಸ್. ಹಾಗೂ ಉಡುಪಿ ನಿವಾಸಿ ಕಾತ್ಯಾಯಿನಿ ಅವರ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ, ವರ ಸುಹಾಸ್ ಅವರು ಸದ್ಯ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಕಾರಣ, ಕಚೇರಿಯಿಂದ ರಜೆ ಸಿಗದೇ ಸಮಾರಂಭಕ್ಕೆ ಹಾಜರಾಗುವುದು ಕಷ್ಟವಾಗಿತ್ತು.

ಇದಕ್ಕೆ ಪರಿಹಾರವಾಗಿ, ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಉಡುಪಿಯ ಸರಸ್ವತಿ ಸಭಾಭವನದಲ್ಲಿ ಆನ್‌ಲೈನ್ ಮೂಲಕವೇ ನಿಶ್ಚಿತಾರ್ಥ ನೆರವೇರಿತು. ವಧು-ವರರಿಬ್ಬರೂ ಕ್ಯಾಮರಾದ ಎದುರು ಪರಸ್ಪರ ಉಂಗುರವನ್ನು ತೋರಿಸಿ, ನಂತರ ತಮ್ಮ ಕೈಗಳಿಗೆ ಉಂಗುರಗಳನ್ನು ಧರಿಸಿದರು. ಸಭಾಭವನದಲ್ಲಿ ನೆರೆದಿದ್ದ ಬಂಧು-ಬಾಂಧವರು ಆರತಿ ಬೆಳಗಿ, ಅಕ್ಷತೆ ಹಾಕಿ ನೂತನ ಜೋಡಿಗೆ ಆಶೀರ್ವಾದ ಮಾಡಿದರು.

ಈ ನಿಶ್ಚಿತಾರ್ಥದ ಮತ್ತೊಂದು ವಿಶೇಷವೆಂದರೆ, ಉಡುಪಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಬೆಳಿಗ್ಗೆಯ ಸಮಯವಾಗಿತ್ತು, ಆದರೆ ಕೆನಡಾದಲ್ಲಿ ಅದೇ ಸಮಯದಲ್ಲಿ ಮಧ್ಯರಾತ್ರಿ ಆಗಿತ್ತು. ದೂರವಿದ್ದರೂ ಶುಭಕಾರ್ಯ ನೆರವೇರಿಸಲು ತಂತ್ರಜ್ಞಾನವನ್ನು ಬಳಸಿಕೊಂಡ ಈ ಅಪರೂಪದ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!