Thursday, December 18, 2025

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಯುವತಿ ಆತ್ಮಹತ್ಯೆ: ಅಪಪ್ರಚಾರ ಬೇಡ ಎಂದ ಕಮಿಷನರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ ಶಿವಗಿರಿ ಸಮೀಪ ಬುಧವಾರ ಬೆಳಗಿನ ಜಾವ ನಡೆದಿದೆ. ಮೃತಳನ್ನು ಬಳ್ಳಾರಿ ಜಿಲ್ಲೆಯ ಬಿ ಕಗ್ಗಲ್ ಗ್ರಾಮದ‌ ಪಲ್ಲವಿ (24) ಎಂದು ಗುರುತಿಸಲಾಗಿದೆ.

ಈ ಯುವತಿ ಕಳೆದ ಕೆಲ ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗಾಗಿ ಧಾರವಾಡದಲ್ಲಿ ಇದ್ದರು. ಇತ್ತೀಚೆಗೆ ಧಾರವಾಡದಲ್ಲಿ ಯುವಕ‌, ಯುವತಿಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದರು. ಆದರೆ ಇಂದು ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದು, ಶವಪರೀಕ್ಷೆ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಯಿತು. ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಶಿಕುಮಾರ್, ವಿದ್ಯಾರ್ಥಿನಿ ವೈಯಕ್ತಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್​​ನೋಟ್ ಸಿಕ್ಕಿದೆ. ಆರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಾವು ಅವರ ಕುಟುಂಬದ ಜೊತೆಯೂ ಮಾತನಾಡಿದ್ದೇವೆ. ಅವರೂ ಕೂಡ ಆರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಯುವತಿಯಾದ ಕಾರಣ ಡೆತ್ ನೋಟ್​ನಲ್ಲಿನ ಯಾವುದೇ ವಿಷಯವನ್ನು ಬಹಿರಂಗಪಡಿಸುವುದಿಲ್ಲ. ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದರು.

ಸರ್ಕಾರಿ ನೌಕರಿ ಸಿಗದ್ದಕ್ಕೆ ಮತ್ತು ನೇಮಕಾತಿ ಪ್ರಕ್ರಿಯೆ ಆಗದೇ ಇರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಆಕೆಯ ಸಾವಿಗೂ, ಉದ್ಯೋಗದ ವಿಚಾರಕ್ಕೂ ಸಂಬಂಧವಿಲ್ಲ. ಡೆತ್ ನೋಟ್ ಪ್ರಕಾರ ಅವರು ವೈಯಕ್ತಿಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿನಿ ಆತ್ಮಹತ್ಯೆಗೆ ಬೇರೆ ಬಣ್ಣ ಹಚ್ಚಬಾರದು. ಆ ಮೂಲಕ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಂದಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ತಿಳಿಸಿದರು.

ಯುವತಿಯ ತಂದೆ ಉಲ್ತಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಳು. ರಜೆ ಇದ್ದಾಗ ಊರಿಗೆ ಬಂದು ಹೋಗುತ್ತಿದ್ದಳು‌. ಆರೋಗ್ಯ ಸಮಸ್ಯೆ ಹಾಗೂ ಕೌಟುಂಬಿಕ ಕಾರಣದಿಂದ ಈ ರೀತಿ ಮಾಡಿಕೊಂಡಿದ್ದಾಳೆ. ಈ ಹಿಂದೆ ಪೊಲೀಸ್ ದೈಹಿಕ ಪರೀಕ್ಷೆ ಪಾಸಾಗಿದ್ದಳು. ಆದರೆ ನೇಮಕಾತಿ ಆಗಿರಲಿಲ್ಲ. ಬಿಕಾಂ ಮುಗಿಸಿದ್ದರಿಂದ ಬೇರೆ ಬೇರೆ ನೌಕರಿಗಾಗಿ ಸಿದ್ದತೆ ಮಾಡಿಕೊಂಡಿದ್ದಳು. ಯಾವ ಪರೀಕ್ಷೆಯಲ್ಲೂ ಫೇಲಾಗಿರಲಿಲ್ಲ. ನಾವು ಆಕೆಯ ಮದುವೆಗೆ ಗಂಡು ಹುಡುಕಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

error: Content is protected !!