ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುವ ವೇಳೆ ಅಡಿಭಾಗ ಕುಸಿದು ಕ್ರೇನ್ ರೈಲು ಹಳಿಗೆ ಉರುಳಿ ಬಿದ್ದ ಘಟನೆ ಬುಧವಾರ ಸಂಭವಿಸಿದೆ.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಬುಧವಾರ ಕ್ರೇನ್ ಪ್ಲಾಟ್ ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉರುಳಿ ರೈಲು ಹಳಿ ಮೇಲೆ ಅಡ್ಡಲಾಗಿ ಬಿದ್ದಿದೆ.
ಪ್ಲಾಟ್ ಫಾರ್ಮ್ ನ ಸೈಡ್ ನಲ್ಲಿದ್ದ ಕ್ರೇನ್ ಪ್ಲಾಟ್ ಫಾರ್ಮ್ ನ ಬದಿ ಕುಸಿದ ಪರಿಣಾಮ ನಿಯಂತ್ರಣ ತಪ್ಪಿ ರೈಲು ಹಳಿಗೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ಕ್ರೇನ್ ಆಪರೇಟರ್ ಅಲ್ಪ ಗಾಯಗೊಂಡಿದ್ದಾರೆ. ಬಳಿಕ ಎರಡು ಕ್ರೇನ್ ಗಳ ಮೂಲಕ ಕಾರ್ಯಾಚರಣೆ ನಡೆಸಿ ರೈಲು ಹಳಿಯಿಂದ ಉರುಳಿ ಬಿದ್ದ ಕ್ರೇನ್ ನ್ನು ಮೇಲೆತ್ತಿ ತೆರವು ಮಾಡಲಾಯಿತು.
ನಿಲ್ದಾಣದಲ್ಲಿ ರೈಲು ವಿದ್ಯುತ್ ಮಾರ್ಗ ಹಾದು ಹೋಗಿದ್ದು, ನಿಲ್ದಾಣದಲ್ಲಿ ಇತರೆ ರೈಲು, ಗೂಡ್ಸ್ ವಾಹನ ಇಲ್ಲದೇ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸಮರ್ಪಕ ಕಾಮಗಾರಿಗೆ ರೈಲು ಬಳಕೆದಾರರು ಒತ್ತಾಯಿಸಿದ್ದಾರೆ.

