ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಮೊಹಾಲಿಯಲ್ಲಿ ಕಬಡ್ಡಿ ಪಂದ್ಯದ ಸಮಯ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಖ್ಯಾತ ಕಬಡ್ಡಿ ಪಟು ರಾಣಾ ಬಾಲಚೌರಿಯಾ ಸ್ಥಳದಲ್ಲೇ ಮೃತಟ್ಟಿದ್ದಾರೆ.
ಇದಾದ ಬಳಿಕ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಕ್ರೀಡಾಭಿಮಾನಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಇತ್ತ ಸಹ ಆಟಗಾರರು ಆತಂಕಕ್ಕೊಳಗಾಗಿದ ಘಟನೆ ನಡೆದಿತ್ತು.
ಇದೀಗ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಮೊಹಾಲಿ ಪೊಲೀಸರು ಎರಡೇ ದಿನದಲ್ಲಿ ಪತ್ತೆ ಹಚ್ಚಿದ್ದಾರೆ. ವಶಕ್ಕೆ ಪಡೆಯಲು ಹೋದಾಗ ನಡೆಸಿದ ಗುಂಡಿನ ಚಕಮಕಿಯಲ್ಲಿ ಆರೋಪಿ ಮಿದ್ದುನ ಹತ್ಯೆ ಮಾಡಲಾಗಿದೆ.
ಹರ್ಪಿಂದರ್ ಅಲಿಯಾಸ್ ಮಿದ್ದು ಕಬಡ್ಡಿ ಪಟು ರಾಣಾ ಮೇಲೆ ಗುಂಡಿನ ದಾಳಿ ನಡೆಸಿದ್ದರು. ವಾಹನ ಮೂಲಕ ಕಬಡ್ಡಿ ಟೂರ್ನಿ ಆಯೋಜನೆ ಬಳಿ ಬಂದ ಹರ್ಪಿಂದರ್ ಅಲಿಯಾಸ್ ಮಿದ್ದು ಹಾಗೂ ಸಹಚರರು ಏಕಾಏಕಿ ತೀರಾ ಹತ್ತಿರದಿಂದಲೇ ರಾಣಾ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದರು. ಹೀಗಾಗಿ ರಣಾ ಸ್ಥಳದಲ್ಲೇ ಮೃತಪಟ್ಟಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯ, ಮೊಬೈಲ್ ಮೂಲಕ ದಾಖಲಾಗಿರುವ ದೃಶ್ಯ, ಕಬಡ್ಡಿ ನೇರ ಪ್ರಸಾದ ದೃಶ್ಯಗಳನ್ನು ಕಲೆ ಹಾಕಿದ್ದರು. ಬಳಿಕ ತನಿಖೆ ತೀವ್ರಗೊಂಡಿತ್ತು.
ಇಂದು ಮೊಹಾಲಿಯ ಹೊರವಲಯದ ತರ್ನ ತರಾನ್ ಪ್ರದೇಶದಲ್ಲಿ ಪೊಲೀಸರು ಕಾರ್ಯಚರಣೆ ತೀವ್ರಗೊಳಿಸಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರೋಪಿ ಮಿದ್ದು ಹತ್ಯೆಯಾಗಿದ್ದಾನೆ. ಆರೋಪಿ ಮಿದ್ದು ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿರುವುದಾಗಿ ಮೊಹಾಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಹರ್ಪಿಂದರ್ ಅಲಿಯಾಸ್ ಮಿದ್ದುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬದುಕುಳಿಯಲಿಲ್ಲ. ಆರೋಪಿ ಹರ್ಪಿಂದರ್ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಪೊಲೀಸ್ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ. ಕಬಡ್ಡಿ ಪಟುವಿನ ಹತ್ಯೆಗೆ ಕಾರಣವೇನು ಅನ್ನೋದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಮೊಹಾಲಿಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಿದ್ದ ರಾಣಾ ಸ್ವತಃ ಕಬಡ್ಡಿ ಪಟುವಾಗಿ ಅಂಗಣಕ್ಕಿಳಿದಿದ್ದ. ತಂಡದ ನಾಯಕನಾಗಿದ್ದ ರಾಣಾ ಟಾಸ್ ಪ್ರಕ್ರಿಯೆ ಮುಗಿಸಿ ವಾರ್ಮ್ ಅಪ್‌ನಲ್ಲಿ ತೊಡಗಿಸಿಕೊಂಡಿದ್ದ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭಗೊಳ್ಳಬೇಕಿತ್ತು. ಉಭಯ ತಂಡದ ಸದಸ್ಯರು ವಾರ್ಮ್ ಅಪ್‌ನಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಅಪರಿಚಿತರಾಗಿ ಬಂದ ಹರ್ಪಿಂದರ್ ಹಾಗೂ ಆತನ ಸಹಚರರು ರಾಣಾ ಮೇಲೆ ಗುಂಡಿನ ದಾಳಿ ನಡೆಸಿದ್ದರು.

