ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ದಕ್ಷಿಣ ಆಫ್ರಿಕಾ ನಾಲ್ಕನೇ ಟಿ20ಐಗೆ ಮಂಜು ಅಡ್ಡಿಪಡಿಸಿದೆ. ಪರಿಣಾಮವಾಗಿ, ಎರಡೂ ತಂಡಗಳ ನಡುವಿನ ಮ್ಯಾಚ್ ಗೆ ಟಾಸ್ ವಿಳಂಬವಾಗಲಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
ಗಿಲ್ ಅನುಪಸ್ಥಿತಿಯು ದೀರ್ಘಕಾಲದವರೆಗೆ ಬೆಂಚ್ ಕಾಯುತ್ತಿರುವ ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್ XI ನಲ್ಲಿ ಅವಕಾಶ ಮಾಡಿಕೊಡಲಿದೆ.
ಶುಭ್ಮನ್ ಗಿಲ್ ಅವರನ್ನು ಹೊರಗುಳಿಯಲು ಕಾರಣ ಅವರ ಕಾಲಿನ ಗಾಯ ಎಂದು ತಂಡದ ಆಪ್ತ ಮೂಲಗಳು ತಿಳಿಸಿವೆ.
ಏಷ್ಯಾ ಟಿ20 ಕಪ್-2025 ಟೂರ್ನಮೆಂಟ್ ಮೂಲಕ ಭಾರತ ಟಿ20 ತಂಡಕ್ಕೆ ಮರಳಿದ್ದ ಗಿಲ್, ಅಂದಿನಿಂದ ಆರಂಭಿಕ ಆಟಗಾರನಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ (4(2), 0(1)) ನಿರಾಸೆ ಮೂಡಿಸಿದ್ದ ಗಿಲ್, ಧರ್ಮಶಾಲಾದಲ್ಲಿ ಅಂತಿಮವಾಗಿ ಎರಡಂಕಿ ಮೊತ್ತ ದಾಟಿದ್ದರು. ಆ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಬಂದು 28 ಎಸೆತಗಳಲ್ಲಿ 28 ರನ್ ಗಳಿಸಿ ಮಾರ್ಕೊ ಜಾನ್ಸೆನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಗಿಲ್ ಆರಂಭಿಕನಾಗಿ ಬಂದಾಗಿನಿಂದ ಅಮೋಘ ಫಾರ್ಮ್ನಲ್ಲಿದ್ದ ಸಂಜು ಸ್ಯಾಮ್ಸನ್ರನ್ನ ಮ್ಯಾನೇಜ್ಮೆಂಟ್ ಕಡೆಗಣಿಸಿದೆ. ಈ ಸರಣಿಯಲ್ಲಿ ಸಂಜು ಒಂದೂ ಪಂದ್ಯದಲ್ಲೂ ಅವಕಾಶ ಪಡೆದಿಲ್ಲ. ಇದೀಗ ಗಿಲ್ ಹೊರಬಿದ್ದಿರುವುದರಿಂದ ಅವರಿಗೆ ಮತ್ತೊಂದು ಅವಕಾಶ ಸಿಗುವ ಅವಕಾಶವಿದೆ.

