ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ನಾಯಕರೊಬ್ಬರು ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ನಂತರ, ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳ ಕುರಿತು ಉಗ್ರಗಾಮಿ ಅಂಶಗಳು ಹರಡುತ್ತಿರುವ ಸುಳ್ಳು ನಿರೂಪಣೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಮಧ್ಯಂತರ ಸರ್ಕಾರವು ಈ ಘಟನೆಗಳ ಕುರಿತು ಸಂಪೂರ್ಣ ತನಿಖೆ ನಡೆಸಿಲ್ಲ ಅಥವಾ ಭಾರತದೊಂದಿಗೆ ಯಾವುದೇ ಅರ್ಥಪೂರ್ಣ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂಬುದು ದುರದೃಷ್ಟಕರ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಢಾಕಾದ ಕೇಂದ್ರ ಶಹೀದ್ ಮಿನಾರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಹಸ್ನತ್ ಅಬ್ದುಲ್ಲಾ, ಬಾಂಗ್ಲಾದೇಶವು ಪ್ರತ್ಯೇಕತಾವಾದಿ ಗುಂಪುಗಳು ಸೇರಿದಂತೆ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಬಹುದು. ಭಾರತದ ‘ಸೆವೆನ್ ಸಿಸ್ಟರ್ಸ್’ ಅಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳನ್ನು ಪ್ರತ್ಯೇಕಿಸುವ ಪ್ರಯತ್ನಗಳಿಗೆ ಸಹಾಯ ಮಾಡಬಹುದು ಎಂದು ಹೇಳಿದ್ದರು.

