ಹೊಸದಿಗಂತ ಡಿಜಿಟಲ್ ಡೆಸ್ಕ್:
ಜರ್ಮನಿಯ ಮ್ಯೂನಿಚ್‌ನಲ್ಲಿರುವ ಬಿಎಂಡಬ್ಲ್ಯು ವೆಲ್ಟ್ ಮತ್ತು ಬಿಎಂಡಬ್ಲ್ಯು ಕೈಗಾರಿಕೆಗಳಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಈ ವೇಳೆ ಭಾರತದಲ್ಲಿ ಉತ್ಪಾದನೆ ಕುಸಿಯುತ್ತಿದೆ. ಉತ್ಪಾದನೆಯು ಬಲವಾದ ಆರ್ಥಿಕತೆಯ ಬೆನ್ನೆಲುಬು. ಅದಕ್ಕೆ ತಕ್ಕ ಪರಿಸರ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಎಂದು ತಿಳಿಸಿದ್ದಾರೆ.
ಬಿಎಂಡಬ್ಲ್ಯು ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಟಿವಿಎಸ್‌ನ 450 ಸಿಸಿ ಮೋಟಾರ್‌ಸೈಕಲ್ ಅನ್ನು ರಾಹುಲ್ ಗಾಂಧಿ ವೀಕ್ಷಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, ಭಾರತದಲ್ಲಿ ಉತ್ಪಾದನೆಗೆ ವೇಗ ನೀಡಲು ಅರ್ಥಪೂರ್ಣ ಉತ್ಪಾದನಾ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದ್ದಾರೆ.
ಬಿಎಂಡಬ್ಲ್ಯು ವೆಲ್ಟ್ ಮತ್ತು ಬಿಎಂಡಬ್ಲ್ಯು ಕೈಗಾರಿಕೆಯ ಮಾರ್ಗದರ್ಶಿ ಪ್ರವಾಸದೊಂದಿಗೆ ಮ್ಯೂನಿಚ್‌ನಲ್ಲಿ ಬಿಎಂಡಬ್ಲ್ಯು ಪ್ರಪಂಚವನ್ನು ಅನುಭವಿಸುವ ಅವಕಾಶ ಸಿಕ್ಕಿತು. ಇದು ವಿಶ್ವದರ್ಜೆಯ ಉತ್ಪಾದನೆಯ ಅದ್ಭುತ ನೋಟ ಎಂದು ತಿಳಿಸಿದ್ದಾರೆ.
ಉತ್ಪಾದನೆ ಬಲವಾದ ಆರ್ಥಿಕತೆಗಳ ಬೆನ್ನೆಲುಬಾಗಿದೆ. ದುಃಖದ ಸಂಗತಿಯೆಂದರೆ ಭಾರತದಲ್ಲಿ ಉತ್ಪಾದನೆ ಕುಸಿಯುತ್ತಿದೆ. ಬೆಳವಣಿಗೆಯನ್ನು ವೇಗಗೊಳಿಸಲು ನಾವು ಹೆಚ್ಚು ಉತ್ಪಾದಿಸಬೇಕು. ಇದಕ್ಕಾಗಿ ಅರ್ಥಪೂರ್ಣ ಉತ್ಪಾದನಾ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಆ ಮೂಲಕ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಪಂಚದಾದ್ಯಂತದ 117 ಪ್ರಗತಿಪರ ಪಕ್ಷಗಳ ಪ್ರಮುಖ ಗುಂಪಾದ ಪ್ರೋಗ್ರೆಸ್ಸಿವ್ ಅಲೈಯನ್ಸ್‌ನ ಆಹ್ವಾನದ ಮೇರೆಗೆ ರಾಹುಲ್ ಗಾಂಧಿ ಜರ್ಮನಿಗೆ ಭೇಟಿ ನೀಡಿದ್ದಾರೆ. ತಮ್ಮ ಪ್ರವಾಸದ ಸಂದರ್ಭದಲ್ಲಿ ಭಾರತೀಯ ವಲಸಿಗರೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ ಜರ್ಮನ್ ಸರ್ಕಾರದ ಮಂತ್ರಿಗಳನ್ನು ಅವರು ಭೇಟಿ ಮಾಡಲಿದ್ದಾರೆ.

