Saturday, December 20, 2025

ಕೆರೆ, ಸ್ಮಶಾನ ಜಾಗ ಕಬಳಿಕೆ ಆರೋಪ: ಆಸ್ತಿ ನಮ್ಮ ತಾತಂದು ಎಂದ ಕೃಷ್ಣಬೈರೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಮ್ಮ ತಾತನವರಿಂದ ನಮಗೆ ಆಸ್ತಿ ಬಂದಿದೆ. ಇಲ್ಲದಿರುವುದ ಹುಡುಕಿ ಆರೋಪ ಮಾಡುವುದು ಅವರ ಸಂಸ್ಕೃತಿ ಎಂದು ಭೂ ಕಬಳಿಕೆ ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದ್ದಾರೆ.

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಆರೋಪ ಮಾಡಬೇಕು ಎಂಬ ಕಾರಣಕ್ಕೆ ಯಾವುದೇ ವಿಚಾರ ಇಲ್ಲದಿದ್ದರೂ ಹುಡುಕಿ ಆರೋಪ ಮಾಡಲಾಗುತ್ತಿದೆ. ಗರುಡನಪಾಳ್ಯದ ಭೂಮಿ ನನ್ನ ತಾತ ಅವರಿಂದ ಬಂದ ಪಿತ್ರಾರ್ಜಿತ ಆಸ್ತಿ. ನಮ್ಮ ತಂದೆಯ ಮೂಲಕ ಭಾಗವಾಗಿ ನಮಗೆ ಬಂದಿದೆ. ಅದನ್ನು ಯಾವ ಮೂಲದಿಂದಲಾದರೂ ಪರಿಶೀಲಿಸಿಕೊಳ್ಳಲಿ. ಯಾವ ಕಾಲದಲ್ಲಿ ಏನೇನಾಗಿದೆ ಎಂಬುದನ್ನು ಪರೀಕ್ಷಿಸಲಿ ಎಂದು ಹೇಳಿದರು.

ನಾನು ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಇಲಾಖಾ ಅಥವಾ ಸರ್ಕಾರದ ತನಿಖೆ ನಡೆದರೆ ಪಕ್ಷಪಾತವಾಗುತ್ತದೆ ಎಂದಾದರೆ ಯಾವುದಾದರೂ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಲಿ. ಲೋಕಾಯುಕ್ತಕ್ಕೆ ನ್ಯಾಯಾಲಯಕ್ಕೆ ದೂರು ನೀಡಿ ತನಿಖೆ ಮಾಡಿಸಲಿ. ಈ ವಿಚಾರದಲ್ಲಿ ನನ್ನ ತಪ್ಪಿದೆ ಎಂದು ಸಾಬೀತಾದರೆ ನಾನು ತಲೆಬಾಗುತ್ತೇನೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೆಸರೆರಚಾಟ ಮಾಡುವುದು ಸರಿಯಲ್ಲ. ಇಲ್ಲ ಸಲ್ಲದ ಆರೋಪ ಮಾಡುವುದನ್ನೇ ವೃತ್ತಿಯಾಗಿಸಿಕೊಂಡವರಷ್ಟೇ ಈ ರೀತಿ ಮಾಡುತ್ತಾರೆಂದು ತಿಳಿಸಿದರು.

error: Content is protected !!