ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಗೂ ಮುನ್ನ ಸಾಕಷ್ಟು ಕುತೂಹಲ ಮೂಡಿಸಿದ್ದ ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ವೇಗ ಕಾಪಾಡಿಕೊಳ್ಳಲು ಕಷ್ಟಪಡುತ್ತಿದೆ. ದ್ವಿಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಆರಂಭದಲ್ಲಿ ಗಮನ ಸೆಳೆದರೂ, ದಿನಗಳು ಸಾಗಿದಂತೆ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಿರುವುದು ಕಲೆಕ್ಷನ್ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಮಿಶ್ರ ಪ್ರತಿಕ್ರಿಯೆ ಚಿತ್ರಕ್ಕೆ ದೊಡ್ಡ ಅಡ್ಡಿಯಾಗಿದ್ದು, ವಾರದ ಮಧ್ಯಭಾಗದಲ್ಲಿ ಗಳಿಕೆ ಲಕ್ಷಗಳ ಮಟ್ಟಕ್ಕೆ ಕುಸಿದಿದೆ.
ಡಿಸೆಂಬರ್ 5ರಂದು ಬಿಡುಗಡೆಯಾದ ‘ಡೆವಿಲ್’ ಸಿನಿಮಾ ಒಂದು ವಾರ ಪೂರೈಸಿದ್ದು, ವರದಿಗಳ ಪ್ರಕಾರ ಈವರೆಗೆ ಸುಮಾರು 25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನದ ಭರ್ಜರಿ ಆರಂಭದಿಂದ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿತ್ತು. ಆದರೆ ಕಥೆ ಮತ್ತು ನಿರೂಪಣೆ ಕುರಿತ ಟೀಕೆಗಳು ಹರಡುತ್ತಿದ್ದಂತೆ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. ಡಿಸೆಂಬರ್ 17ರಂದು ಚಿತ್ರ ಕೇವಲ 80 ಲಕ್ಷ ರೂಪಾಯಿ ಗಳಿಸಿದ್ದು, ಅದರ ಹಿಂದಿನ ದಿನ 1.05 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.
ವಾರದ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಮುಂದಿನ ವೀಕೆಂಡ್ ‘ಡೆವಿಲ್’ ಪಾಲಿಗೆ ನಿರ್ಣಾಯಕವಾಗಲಿದೆ. ಪ್ರಸ್ತುತ ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರಕ್ಕೆ ಹೆಚ್ಚು ಬೆಂಬಲ ಸಿಗುತ್ತಿದ್ದರೂ, ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಸ್ಪರ್ಧೆ ಹೆಚ್ಚಿಸಲಿದೆ. ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ‘ಡೆವಿಲ್’ ಲಾಭದ ಹಾದಿ ಹಿಡಿಯಬೇಕಾದರೆ ಮುಂದಿನ ದಿನಗಳ ಕಲೆಕ್ಷನ್ ಅತ್ಯಂತ ಮಹತ್ವದ್ದಾಗಿದೆ.

