ಅಡುಗೆ ಮನೆ ಎಂದರೆ ಮನೆಯ ಹೃದಯ. ಆದರೆ ಅಡುಗೆ ಮುಗಿದ ಬಳಿಕ ಸಿಂಕ್‌ನಲ್ಲಿ ಜಮಾಗೊಳ್ಳುವ ಪಾತ್ರೆಗಳು ಮತ್ತು ಅವುಗಳಿಂದ ಉಂಟಾಗುವ ಬ್ಲಾಕ್ ಸಮಸ್ಯೆ ಬಹುತೇಕ ಮನೆಗಳಲ್ಲಿ ಸಾಮಾನ್ಯ. ಸಿಂಕ್‌ನಲ್ಲಿ ನೀರು ಸರಿಯಾಗಿ ಹರಿಯದೆ ನಿಲ್ಲುವುದು, ಕೆಟ್ಟ ವಾಸನೆ ಬರುತ್ತಿರುವುದು ದಿನನಿತ್ಯದ ಕೆಲಸಕ್ಕೂ ಕಿರಿಕಿರಿ ಉಂಟುಮಾಡುತ್ತದೆ. ಸಮಯಕ್ಕೆ ಸರಿಯಾಗಿ ಸಿಂಕ್ ಸ್ವಚ್ಛಗೊಳಿಸದಿದ್ದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇದ್ದು, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಅದೃಷ್ಟವಶಾತ್, ಈ ಸಮಸ್ಯೆಗೆ ದುಬಾರಿ ಕ್ಲೀನರ್‌ಗಳ ಅವಶ್ಯಕತೆ ಇಲ್ಲ. ಮನೆಯಲ್ಲೇ ಲಭ್ಯವಿರುವ ಸರಳ ವಸ್ತುಗಳಿಂದಲೇ ಸಿಂಕ್ ಬ್ಲಾಕ್ ತೆರವುಗೊಳಿಸಬಹುದು.
- ಕುದಿಯುವ ನೀರಿನ ಉಪಾಯ: ಸಿಂಕ್ ಬ್ಲಾಕ್ ಆಗಿರುವುದನ್ನು ಗಮನಿಸಿದ ತಕ್ಷಣ ಕುದಿಯುವ ನೀರನ್ನು ನಿಧಾನವಾಗಿ ಪೈಪ್ ಒಳಗೆ ಸುರಿಯಿರಿ. ಇದರಿಂದ ಪೈಪ್ ಗೋಡೆಗಳಿಗೆ ಅಂಟಿರುವ ಜಿಡ್ಡು ಮತ್ತು ಆಹಾರ ಕಣಗಳು ಕರಗಿ ಹೊರಹೋಗುತ್ತವೆ.
- ಬೇಕಿಂಗ್ ಸೋಡಾ ಮತ್ತು ವಿನೆಗರ್ ಮಿಶ್ರಣ: ಒಂದು ಕಪ್ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ಸಿಂಕ್‌ಗೆ ಹಾಕಿ. ತಕ್ಷಣವೇ ಸ್ವಲ್ಪ ವಿನೆಗರ್ ಸುರಿದರೆ ರಾಸಾಯನಿಕ ಕ್ರಿಯೆಯಿಂದ ಒಳಗಿರುವ ಕಸ ಸಡಿಲವಾಗಿ ನೀರಿನೊಂದಿಗೆ ಹರಿದು ಹೋಗುತ್ತದೆ.
- ಉಪ್ಪು ಮತ್ತು ಬೇಕಿಂಗ್ ಸೋಡಾ ವಿಧಾನ: ಅರ್ಧ ಕಪ್ ಉಪ್ಪು ಮತ್ತು ಅರ್ಧ ಕಪ್ ಬೇಕಿಂಗ್ ಸೋಡಾವನ್ನು ಸಿಂಕ್‌ಗೆ ಹಾಕಿ ಅರ್ಧ ಗಂಟೆ ಬಿಡಿ. ನಂತರ ಬಿಸಿ ನೀರನ್ನು ಸುರಿಸಿದರೆ ಗಟ್ಟಿ ಬ್ಲಾಕ್ ಕೂಡ ತೆರವುಗೊಳ್ಳುತ್ತದೆ.
- ನಿಂಬೆ ರಸ ಮತ್ತು ಅಡುಗೆ ಸೋಡಾ: ಒಂದು ಕಪ್ ಅಡುಗೆ ಸೋಡಾವನ್ನು ಒಂದು ಕಪ್ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಸಿಂಕ್‌ಗೆ ಹಾಕಿ. ಸ್ವಲ್ಪ ಸಮಯದ ಬಳಿಕ ಕುದಿಯುವ ನೀರನ್ನು ಸುರಿಸಿದರೆ ಜಿಡ್ಡು ಹಾಗೂ ದುರ್ವಾಸನೆ ಸಂಪೂರ್ಣವಾಗಿ ದೂರವಾಗುತ್ತದೆ.

