ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಒಳರಾಜಕೀಯ ಮತ್ತು ಭದ್ರತಾ ನೀತಿಗಳಲ್ಲಿ ತೀವ್ರ ಬದಲಾವಣೆಗಳನ್ನು ತರಲು ಮುಂದಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ದೇಶದ ಸಶಸ್ತ್ರ ಪಡೆಗಳ ಸೇವೆ, ತ್ಯಾಗ ಮತ್ತು ಬದ್ಧತೆಯನ್ನು ಗೌರವಿಸುವ ಉದ್ದೇಶದಿಂದ, ಅಮೆರಿಕ ಸೈನಿಕರಿಗೆ ವಿಶೇಷ ನಗದು ನೆರವು ನೀಡಲು ಟ್ರಂಪ್ ಸರ್ಕಾರ ತೀರ್ಮಾನಿಸಿದೆ. ಅಮೆರಿಕದ ಸ್ಥಾಪನಾ ವರ್ಷಾಚರಣೆಯ ಅಂಗವಾಗಿ ‘ವಾರಿಯರ್ ಡಿವಿಡೆಂಡ್’ ಹೆಸರಿನಲ್ಲಿ ಈ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ.
ಈ ಯೋಜನೆಯಡಿ ಪ್ರತಿ ಅಮೆರಿಕನ್ ಸೈನಿಕರಿಗೆ 1,776 ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 1.60 ಲಕ್ಷ ರೂ. ನೀಡಲಾಗುತ್ತದೆ. ದೇಶಾದ್ಯಂತ ಸೇವೆ ಸಲ್ಲಿಸುತ್ತಿರುವ ಸುಮಾರು 14.5 ಲಕ್ಷ ಸಕ್ರಿಯ ಸೈನಿಕರು ಈ ನೆರವಿಗೆ ಅರ್ಹರಾಗಿದ್ದಾರೆ. ಕ್ರಿಸ್‌ಮಸ್‌ಗೆ ಮುನ್ನವೇ ಈ ಮೊತ್ತ ನೇರವಾಗಿ ಸೈನಿಕರಿಗೆ ತಲುಪಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಇತ್ತೀಚೆಗೆ ಜಾರಿಗೆ ಬಂದ ಹೊಸ ಸುಂಕದ ಮಸೂದೆಗಳಿಂದ ಅಮೆರಿಕ ಸರ್ಕಾರ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿದೆ. ಆ ಆದಾಯವನ್ನು ದೇಶಕ್ಕಾಗಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುವ ಸೇನಿಕರಿಗೆ ನೀಡುವುದು ನ್ಯಾಯಸಮ್ಮತ ಎಂದು ಅವರು ಹೇಳಿದರು. ನಮ್ಮ ಮಿಲಿಟರಿಗಿಂತ ಈ ನೆರವಿಗೆ ಹೆಚ್ಚು ಅರ್ಹರು ಯಾರೂ ಇಲ್ಲ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
2025ರ ನವೆಂಬರ್ 30ರ ವೇಳೆಗೆ ಸಕ್ರಿಯ ಕರ್ತವ್ಯದಲ್ಲಿರುವ ನಿರ್ದಿಷ್ಟ ವೇತನ ಶ್ರೇಣಿಯ ಸೇನಿಕರು ಮತ್ತು ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ಮೀಸಲು ಪಡೆ ಸಿಬ್ಬಂದಿಗೂ ಈ ವಾರಿಯರ್ ಡಿವಿಡೆಂಡ್ ಒಮ್ಮೆ ಮಾತ್ರ ಲಭ್ಯವಾಗಲಿದೆ.

