ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆರ್ಥಿಕ ರಾಜಧಾನಿಯಲ್ಲಿ ಮಾನವೀಯತೆಯನ್ನು ಬೆಚ್ಚಿಬೀಳಿಸುವ ಭೀಕರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯ ನೀಡುವ ನೆಪದಲ್ಲಿ ನಿದ್ದೆ ಬರುವ ಔಷಧ ಬೆರೆಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತನನ್ನು ಮಹೇಶ್ ರಮೇಶ್ ಪವಾರ್ (45) ಎಂದು ಗುರುತಿಸಲಾಗಿದೆ.
ಆತ ಬಾಲಕಿಯರಿಗೆ ತಂಪು ಪಾನೀಯ ನೀಡಿ ಅದರಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸುತ್ತಿದ್ದ. ಬಾಲಕಿಯರು ಪ್ರಜ್ಞೆ ತಪ್ಪಿದ ಬಳಿಕ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈ ಕೃತ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಸಂತ್ರಸ್ತೆಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.
ಡಿಸೆಂಬರ್ 13ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು. ದೂರು ದಾಖಲಾಗಿದ ಆರು ಗಂಟೆಗಳೊಳಗೆ ಆರೋಪಿಯನ್ನು ವಿರಾರ್‌ನಲ್ಲಿ ಬಂಧಿಸಲಾಗಿದೆ. ತನಿಖೆಯ ವೇಳೆ ಆರೋಪಿಯು ವಾಟ್ಸಾಪ್ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿಯು ಇದುವರೆಗೆ 8 ರಿಂದ 10 ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿರುವ ಶಂಕೆ ಇದೆ. ಇದೇ ರೀತಿಯ ಪ್ರಕರಣಗಳು ವಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ನಡೆದಿರುವ ಮಾಹಿತಿ ಲಭ್ಯವಾಗಿದೆ. ಮುಂದಿನ ತನಿಖೆಗಾಗಿ ಆರೋಪಿಯನ್ನು ವಕೋಲಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

