Sunday, December 21, 2025

ವಿದೇಶಗಳಿಗೆ ತೆರಳಿ ಭಿಕ್ಷೆ ಬಿಡ್ತಿರೋ ಪಾಕಿಸ್ತಾನೀಯರು: 56 ಸಾವಿರ ಭಿಕ್ಷುಕರನ್ನು ಗಡೀಪಾರು ಮಾಡಿದ ಸೌದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೌದಿ ಅರೇಬಿಯಾವೂ 56000 ಪಾಕಿಸ್ತಾನಿ ಭಿಕ್ಷುಕರನ್ನು ಆ ದೇಶಕ್ಕೆ ಗಡೀಪಾರು ಮಾಡಿ ಎಚ್ಚರಿಕೆ ನೀಡಿದೆ.

ಅಕ್ರಮವಾಗಿ ದೇಶಕ್ಕೆ ವಲಸೆ ಬಂದು ಇಲ್ಲಿ ಸಂಘಟಿತ ಭಿಕ್ಷಾಟನೆ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದರಿಂದ ಯುನೈಟೆಡ್ ಅರಬ್ ಎಮಿರೇಟ್‌ ಹಾಗೂ ಸೌದಿ ಅರೇಬಿಯಾ ದೇಶಗಳು ಪಾಕಿಸ್ತಾನದ ಪ್ರಜೆಗಳ ಮೇಲೆ ತೀವ್ರವಾದ ಕಣ್ಣಿಟ್ಟಿದ್ದು, ಕೇವಲ ಸೌದಿ ಅರೇಬಿಯಾವೊಂದೇ ಭಿಕ್ಷಾಟನೆಯಲ್ಲಿ ತೊಡಗಿದ್ದ ಪಾಕಿಸ್ತಾನದ 56 ಸಾವಿರ ಜನರನ್ನು ಮರಳಿ ಆ ದೇಶಕ್ಕೆ ಗಡೀಪಾರು ಮಾಡಿದೆ.

ವಿದೇಶದಲ್ಲಿ ಪಾಕಿಸ್ತಾನದ ಜನರ ಈ ವರ್ತನೆ ದೇಶದ ಅಂತಾರಾಷ್ಟ್ರೀಯ ಪ್ರತಿಷ್ಠೆಗೆ ಹಾನಿ ಮಾಡುತ್ತಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿದ್ದಾರೆ.

ಯುಎಇ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದರೆ ಸೌದಿ ಅರೇಬಿಯಾವೂ 56,000ದಷ್ಟು ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿದ್ದು, ಅವರ ವಿರುದ್ಧ ಭಿಕ್ಷಾಟನೆ ಹಾಗೂ ಅಪರಾಧ ಕೃತ್ಯಗಳ ಆರೋಪ ಹೊರಿಸಿದೆ.

ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಷನ್ ಏಜೆನ್ಸಿಯ ನೀಡಿದ ಮಾಹಿತಿಯೂ, ಸಮಸ್ಯೆ ಪ್ರಮಾಣ ಎಷ್ಟು ತೀವ್ರವಾಗಿದೆ ಎಂದು ತೋರಿಸುತ್ತಿದೆ. 2025 ರಲ್ಲಿ, ಸಂಘಟಿತ ಭಿಕ್ಷಾಟನೆ ಸಿಂಡಿಕೇಟ್‌ಗಳನ್ನು ನಾಶಮಾಡಲು ಮತ್ತು ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ 66,154 ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ್ದರು. ಈ ಜಾಲಗಳು ಪಾಕಿಸ್ತಾನದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುತ್ತಿವೆ ಎಂದು ಎಫ್‌ಐಎ ಮಹಾನಿರ್ದೇಶಕ ರಿಫತ್ ಮುಖ್ತಾರ್ ಹೇಳಿದ್ದಾರೆ.

ಈ ಪ್ರವೃತ್ತಿ ಕೇವಲ ಕೊಲ್ಲಿಗೆ ಸೀಮಿತವಾಗಿಲ್ಲ. ಆಫ್ರಿಕಾ ಮತ್ತು ಯುರೋಪ್‌ಗೆ ಪ್ರಯಾಣ ಬೆಳೆಸುವುದರ ಜೊತೆಗೆ ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ತಾಣಗಳಿಗೆ ಇಲ್ಲಿಂದ ಜನ ಹೋಗುತ್ತಾರೆ, ಪ್ರವಾಸಿ ವೀಸಾಗಳ ದುರುಪಯೋಗವನ್ನು ಮಾಡುತ್ತಾರೆ ಇಂತಹ ಹಲವು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.

ಮುಖ್ತಾರ್ ಅವರ ಪ್ರಕಾರ, ಸೌದಿ ಅರೇಬಿಯಾ ಈ ವರ್ಷ ಭಿಕ್ಷಾಟನೆ ಆರೋಪದ ಮೇಲೆ 24,000 ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿದೆ. ದುಬೈ ಸುಮಾರು 6,000 ವ್ಯಕ್ತಿಗಳನ್ನು ವಾಪಸ್ ಕಳುಹಿಸಿದರೆ, ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿದೆ. ಈ ವಿಚಾರದ ಬಗ್ಗೆ ಕಳೆದ ವರ್ಷ ಸೌದಿ ಅಧಿಕಾರಿಗಳು ತೀವ್ರ ಗಮನ ಸೆಳೆದಿದ್ದರು. 2024ರಲ್ಲಿ ಭಿಕ್ಷುಕರು ಭಿಕ್ಷೆಗಾಗಿ ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣಿಸಲು ಉಮ್ರಾ ವೀಸಾಗಳನ್ನು ಬಳಸಿಕೊಳ್ಳುವುದನ್ನು ತಡೆಯುವಂತೆ ರಿಯಾದ್ ಪಾಕಿಸ್ತಾನವನ್ನು ಔಪಚಾರಿಕವಾಗಿ ಒತ್ತಾಯಿಸಿತ್ತು. ಇದನ್ನು ತಡೆಯುವಲ್ಲಿ ವಿಫಲವಾದರೆ ಪಾಕಿಸ್ತಾನಿ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು ಎಂದು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಆ ಸಮಯದಲ್ಲಿ ಎಚ್ಚರಿಸಿತ್ತು.

error: Content is protected !!