Friday, December 19, 2025

ಉತ್ತರ ಕೆರೊಲಿನಾದಲ್ಲಿ ಖಾಸಗಿ ಜೆಟ್ ಪತನ: ಮಾಜಿ NASCAR ಚಾಲಕ ಸೇರಿ ಏಳು ಮಂದಿಯ ದುರ್ಮರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕಾದ ಉತ್ತರ ಕೆರೊಲಿನಾ ರಾಜ್ಯದಲ್ಲಿ ನಡೆದ ಭೀಕರ ವಿಮಾನ ದುರಂತವು ಇಡೀ ವಾಯುಯಾನ ವಲಯವನ್ನು ಬೆಚ್ಚಿಬೀಳಿಸಿದೆ. ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಮುಂದಾಗಿದ್ದ ಖಾಸಗಿ ಬ್ಯುಸಿನೆಸ್ ಜೆಟ್ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿದ್ದು, ವಿಮಾನದಲ್ಲಿದ್ದ ಎಲ್ಲ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಮೃತರಲ್ಲಿ ಮಾಜಿ NASCAR ರೇಸಿಂಗ್ ಚಾಲಕ ಗ್ರೆಗ್ ಬಿಫಲ್ ಹಾಗೂ ಅವರ ಕುಟುಂಬ ಸದಸ್ಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ ಸುಮಾರು 10:15ರ ಸುಮಾರಿಗೆ ಸೆಸ್ನಾ C550 ಮಾದರಿಯ ಈ ಖಾಸಗಿ ಜೆಟ್ ರನ್‌ವೇ ಮೇಲೆ ಇಳಿಯುವ ವೇಳೆ ನಿಯಂತ್ರಣ ತಪ್ಪಿ ರನ್‌ವೇಗೆ ಡಿಕ್ಕಿ ಹೊಡೆದಿದೆ. ಅಪಘಾತದ ತಕ್ಷಣವೇ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಮತ್ತು ಜ್ವಾಲೆಗಳು ರನ್‌ವೇ ಪ್ರದೇಶವನ್ನೆಲ್ಲ ಆವರಿಸಿದ್ದವು. ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ತುರ್ತುವಾಗಿ ಸ್ಥಳಕ್ಕೆ ಧಾವಿಸುವುದು ಕಂಡುಬಂದಿದೆ.

ವಿಮಾನದ ದಾಖಲೆಗಳ ಪ್ರಕಾರ, ಈ ಜೆಟ್ ಗ್ರೆಗ್ ಬಿಫಲ್ ಅವರು ನಿರ್ವಹಿಸುತ್ತಿದ್ದ ಕಂಪನಿಗೆ ಸೇರಿದ್ದಾಗಿತ್ತು. ಕುಟುಂಬದೊಂದಿಗೆ ಖಾಸಗಿ ಪ್ರಯಾಣದಲ್ಲಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!