ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಬಿ.ಎಂ. ಶ್ರೀ ನಗರದಲ್ಲಿ ಪತ್ನಿ ತನಗೆ ಗೌರವ ನೀಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ ವ್ಯಾಪಾರಿ ಮಹೇಶ್ ಎಂಬಾತ ತನ್ನ ಪತ್ನಿ ನಾಗರತ್ನಳನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಪತ್ನಿ ತನ್ನ ಹಣವನ್ನು ಬಡ್ಡಿಗೆ ನೀಡುತ್ತಿದ್ದರೂ ತನಗೆ ಹಣ ನೀಡುತ್ತಿರಲಿಲ್ಲ ಎಂಬುದು ಮಹೇಶನ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕಾಗಿ ತನ್ನ ಸ್ನೇಹಿತರಾದ ಭಾಸ್ಕರ್ ಮತ್ತು ಅಭಿಷೇಕ್ ಎಂಬುವವರಿಗೆ 5 ಲಕ್ಷ ರೂ. ಸುಪಾರಿ ನೀಡಿದ್ದ.
ಆರೋಪಿಗಳು ನಾಗರತ್ನ ಒಬ್ಬರೇ ಇದ್ದಾಗ ಮನೆಗೆ ನುಗ್ಗಿ ಸುತ್ತಿಗೆಯಿಂದ ಹಲ್ಲೆ ನಡೆಸಿ, ಬಳಿಕ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದನ್ನು ಅಗ್ನಿ ಅವಘಡ ಎಂದು ಬಿಂಬಿಸುವುದು ಅವರ ಪ್ಲಾನ್ ಆಗಿತ್ತು. ಆದರೆ ತೀವ್ರವಾಗಿ ಗಾಯಗೊಂಡ ನಾಗರತ್ನ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇಟಗಳ್ಳಿ ಪೊಲೀಸರು ಪತಿ ಮಹೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

