ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊನ್ನಾವರ ತಾಲೂಕಿನ ಮಂಕಿ ಕಡಲತೀರದಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ಸಹೋದರರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮದನ್ ನಾರಾಯಣ ಖಾರ್ವಿ (17) ಮತ್ತು ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಗೆಳೆಯರೊಂದಿಗೆ ಕಬಡ್ಡಿ ಆಟವಾಡಿದ್ದ ಇಬ್ಬರು ಸಹೋದರರು, ಆಟ ಮುಗಿದ ನಂತರ ಮೈದಣಿವಾರಿಸಿಕೊಳ್ಳಲು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಅಪ್ಪಳಿಸಿದ ಭಾರೀ ಗಾತ್ರದ ಅಲೆಗಳು ಇಬ್ಬರನ್ನೂ ಒಳಕ್ಕೆ ಎಳೆದೊಯ್ದಿವೆ.
ಸ್ಥಳೀಯರು ಮತ್ತು ಪೊಲೀಸರು ಕೂಡಲೇ ತೀವ್ರ ಶೋಧ ಕಾರ್ಯ ನಡೆಸಿದ್ದು, ಗುರುವಾರ ತಡರಾತ್ರಿಯ ವೇಳೆಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಒಂದೇ ಮನೆಯ ಇಬ್ಬರು ಗಂಡು ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಿರುವುದು ತೀವ್ರ ವಿಷಾದ ಮೂಡಿಸಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

