ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಆರೋಗ್ಯ ವ್ಯವಸ್ಥೆಯನ್ನು ಬೆಚ್ಚಿಬೀಳಿಸುವ ಘಟನೆ ಸತ್ನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿಯಿಂದ ರಕ್ತ ವರ್ಗಾವಣೆ ಪಡೆದ ನಾಲ್ವರು ಮಕ್ಕಳಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದ್ದು, ರಾಜ್ಯವ್ಯಾಪಿ ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದ ಹೊಣೆ ಹೊತ್ತು ಆಸ್ಪತ್ರೆಯ ರಕ್ತ ನಿಧಿ ಉಸ್ತುವಾರಿ ವೈದ್ಯರು ಹಾಗೂ ಪ್ರಯೋಗಾಲಯದ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸತ್ನಾದ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ತಪಾಸಣೆ ವೇಳೆ ಡಿಸೆಂಬರ್ 16ರಂದು ಮಕ್ಕಳಿಗೆ ಸೋಂಕು ಇರುವುದನ್ನು ವೈದ್ಯಕೀಯ ತಂಡ ಪತ್ತೆಹಚ್ಚಿತ್ತು. ಸೋಂಕಿಗೆ ಒಳಗಾದ ಮಕ್ಕಳು ಥಲಸ್ಸೇಮಿಯಾ ಎಂಬ ಅನುವಂಶಿಕ ರಕ್ತ ಕಾಯಿಲೆಯಿಂದ ಬಳಲುತ್ತಿದ್ದು, ನಿಯಮಿತವಾಗಿ ರಕ್ತ ವರ್ಗಾವಣೆ ಅವಶ್ಯಕತೆ ಹೊಂದಿದ್ದರು. ರಕ್ತ ಪಡೆದ ಬಳಿಕವೇ ಸೋಂಕು ದೃಢಪಟ್ಟಿರುವುದರಿಂದ, ರಕ್ತ ನಿಧಿಯ ಕಾರ್ಯವಿಧಾನಗಳ ಮೇಲೆ ಗಂಭೀರ ಅನುಮಾನಗಳು ಮೂಡಿವೆ.
ಸೋಂಕಿನ ಮೂಲವನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಆದರೆ ರಕ್ತ ಸಂಗ್ರಹ, ಪರೀಕ್ಷೆ ಮತ್ತು ವಿತರಣೆಯ ಎಲ್ಲಾ ಹಂತಗಳನ್ನು ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಗಳ ಜಂಟಿ ತನಿಖಾ ತಂಡ ಪರಿಶೀಲಿಸುತ್ತಿದೆ. ರಕ್ತವನ್ನು NACO ಮಾರ್ಗಸೂಚಿಗಳಂತೆ ಪರೀಕ್ಷಿಸಲಾಗುತ್ತದೆ ಎಂಬ ಆಸ್ಪತ್ರೆ ಆಡಳಿತದ ಹೇಳಿಕೆಗೆ ವಿರುದ್ಧವಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.

