ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಭದ್ರತೆಯನ್ನು ವರ್ಷಗಳ ಕಾಲ ಆಧಾರವಾಗಿಸಿಕೊಂಡಿದ್ದ MGNREGA ಯೋಜನೆಗೆ ಕೇಂದ್ರ ಸರ್ಕಾರ ಹೊಸ ಮಸೂದೆಯ ಮೂಲಕ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಅಂಗೀಕೃತಗೊಂಡಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ)’ ಅಂದರೆ ವಿಬಿ-ಜಿ ರಾಮ್ ಜಿ ಮಸೂದೆಯು, ಮೂಲ ಉದ್ಯೋಗ ಖಾತರಿ ಕಾಯ್ದೆಯ ಆಶಯವನ್ನೇ ಕುಗ್ಗಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಹೊಸ ಮಸೂದೆ MGNREGAಯ ಪರಿಷ್ಕರಣೆ ಅಲ್ಲ, ಬದಲಾಗಿ ಅದರ ಅಸ್ತಿತ್ವವನ್ನೇ ದುರ್ಬಲಗೊಳಿಸುವ ಕ್ರಮ ಎಂದು ಹೇಳಿದ್ದಾರೆ. ಎರಡು ದಶಕಗಳ ಹಿಂದೆ ಜಾರಿಗೆ ಬಂದಿದ್ದ ಹಕ್ಕು ಆಧಾರಿತ ಮತ್ತು ಬೇಡಿಕೆ ಆಧಾರಿತ ಉದ್ಯೋಗ ಖಾತರಿಯನ್ನು ಒಂದೇ ದಿನದಲ್ಲಿ ನಾಶಪಡಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
MGNREGA ಗ್ರಾಮೀಣ ಕಾರ್ಮಿಕರಿಗೆ ಮಾತುಕತೆಯ ಶಕ್ತಿ ನೀಡಿತ್ತು, ವಲಸೆ ಸಮಸ್ಯೆ ಕಡಿಮೆ ಮಾಡಿತ್ತು, ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಿತ್ತು ಎಂದು ಅವರು ನೆನಪಿಸಿದರು. ಆದರೆ ಹೊಸ ಮಸೂದೆ ಕೆಲಸಕ್ಕೆ ಮಿತಿಯನ್ನು ವಿಧಿಸುವ ಮೂಲಕ ಗ್ರಾಮೀಣ ಬಡವರ ಕೈಯಲ್ಲಿದ್ದ ಮಹತ್ವದ ಸಾಧನವನ್ನು ಕಿತ್ತುಕೊಳ್ಳುತ್ತಿದೆ ಎಂದಿದ್ದಾರೆ.
ಕೋವಿಡ್ ಸಂಕಷ್ಟದ ವೇಳೆ MGNREGA ಕೋಟ್ಯಂತರ ಜನರನ್ನು ಹಸಿವು ಮತ್ತು ಸಾಲದಿಂದ ರಕ್ಷಿಸಿತ್ತು ಎಂದು ಹೇಳಿದ ರಾಹುಲ್ ಗಾಂಧಿ, ಅಂತಹ ಯೋಜನೆಯನ್ನು ದುರ್ಬಲಗೊಳಿಸುವುದು ಗ್ರಾಮ ಮತ್ತು ರಾಜ್ಯಗಳ ವಿರುದ್ಧದ ನಿರ್ಧಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

