ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ತಿಂಗಳಿಂದ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಮತ್ತೊಮ್ಮೆ ಬ್ರೇಕ್ ಬಿದ್ದಿದೆ. ನಟ ಅಭಿಷೇಕ್ ಬಚ್ಚನ್ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು ತಮ್ಮ ದಾಂಪತ್ಯದ ಬಗ್ಗೆ ಹರಡಿದ್ದ ಸುದ್ದಿಗಳಿಗೆ ಮೌನ ಉತ್ತರ ನೀಡಿದ್ದಾರೆ.
ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಗಳು ಆರಾಧ್ಯಾ ಬಚ್ಚನ್‌ಗಾಗಿ ಅಭಿಷೇಕ್ ಮತ್ತು ಐಶ್ವರ್ಯಾ ಒಟ್ಟಿಗೆ ಹಾಜರಾಗಿದ್ದರು. 14 ವರ್ಷದ ಆರಾಧ್ಯಾ ಓದುತ್ತಿರುವ ಈ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಚ್ಚನ್ ಕುಟುಂಬವೇ ಒಂದೇ ಕಡೆ ಸೇರಿದ್ದು ಗಮನ ಸೆಳೆದಿದೆ. ಈ ಸಂದರ್ಭ ಅಭಿಷೇಕ್, ಐಶ್ವರ್ಯಾ ಮಾತ್ರವಲ್ಲದೆ ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯಾ ತಾಯಿ ವೃಂದಾ ರೈ ಕೂಡ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
ಇತ್ತೀಚೆಗೆ ಐಶ್ವರ್ಯಾ ಮತ್ತು ಅಭಿಷೇಕ್ ದೂರವಾಗಿದ್ದಾರೆ, ಬೇರೆ ಬೇರೆ ವಾಸವಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಅಭಿಷೇಕ್ ಹೆಸರು ಮತ್ತೊಬ್ಬ ನಟಿಯೊಂದಿಗೆ ಜೋಡಿಸಲ್ಪಟ್ಟಿದ್ದೂ ಗಾಸಿಪ್‌ಗಳಿಗೆ ತುಪ್ಪ ಸುರಿದಂತಿತ್ತು. ಆದರೆ ಮಗಳ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ದಂಪತಿ ಈ ಎಲ್ಲ ಮಾತುಗಳನ್ನು ತಳ್ಳಿಹಾಕಿದ್ದಾರೆ.

