ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸಾಂಪ್ರದಾಯಿಕ ಹಾಗೂ ಪೌಷ್ಟಿಕಾಂಶಯುಕ್ತ ಹಣ್ಣಿನ ಬೆಳೆಗಳಾದ ಹುಣಸೆ, ಹಲಸು ಮತ್ತು ನೇರಳೆ ಬೆಳೆಗಳ ಸಮಗ್ರ ಅಭಿವೃದ್ಧಿಗಾಗಿ ‘ಪ್ರತ್ಯೇಕ ರಾಷ್ಟ್ರೀಯ ಮಂಡಳಿ’ ಸ್ಥಾಪಿಸುವಂತೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸಂಸತ್ ಭವನದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾದ ಅವರು, ಈ ಕುರಿತು ವಿಸ್ತೃತ ಪ್ರಸ್ತಾವನೆಯ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.
ದೇವೇಗೌಡರ ಪತ್ರದ ಪ್ರಮುಖ ಅಂಶಗಳು:
ಹುಣಸೆ, ಹಲಸು ಮತ್ತು ನೇರಳೆಗಳು ಶತಮಾನಗಳಿಂದಲೂ ಭಾರತದ ಮಣ್ಣಿನಲ್ಲಿ ಸಾವಯವವಾಗಿ ಬೆಳೆಯುತ್ತಿವೆ. ಇವುಗಳಿಗೆ ಕಡಿಮೆ ನೀರು ಮತ್ತು ಕಡಿಮೆ ನಿರ್ವಹಣೆ ಸಾಕು. ಆದರೂ ಇವು ಅತ್ಯಂತ ಔಷಧೀಯ ಗುಣಗಳನ್ನು ಹೊಂದಿವೆ. ಭಾರತವು ಈ ಹಣ್ಣುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ದಕ್ಷಿಣ, ಮಧ್ಯ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಇವು ವ್ಯಾಪಕವಾಗಿ ಬೆಳೆಯುತ್ತಿವೆ.
ಪ್ರಸ್ತುತ ಈ ಬೆಳೆಗಳು ಕಸಿ ಪದ್ಧತಿಯಿಂದಾಗಿ ಉತ್ತಮ ಇಳುವರಿ ನೀಡುತ್ತಿದ್ದರೂ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ವ್ಯರ್ಥವಾಗುತ್ತಿವೆ. ಸಂಸ್ಕರಣಾ ಘಟಕಗಳ ಕೊರತೆ, ಶೀತಲೀಕರಣ ಕೇಂದ್ರಗಳ ಅಲಭ್ಯತೆ ಹಾಗೂ ಸುಗಮ ಖರೀದಿದಾರರಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ವಿವರಿಸಿದರು.
ಈ ಹಣ್ಣುಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದು, ಇವುಗಳನ್ನು ‘ಡಾಲರ್ ಗಳಿಸುವ ಬೆಳೆಗಳು’ ಎಂದು ಕರೆದಿದ್ದಾರೆ. ಇವುಗಳಿಗೆ ರಾಷ್ಟ್ರೀಯ ಮಂಡಳಿ ಸ್ಥಾಪನೆಯಾದರೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ರಾಷ್ಟ್ರೀಯ ಆರ್ಥಿಕತೆಗೂ ದೊಡ್ಡ ಕೊಡುಗೆ ಸಿಗಲಿದೆ ಎಂದು ದೇವೇಗೌಡರು ಪ್ರತಿಪಾದಿಸಿದ್ದಾರೆ.
ಈ ಪತ್ರದ ಆಧಾರದ ಮೇಲೆ ಕೇಂದ್ರ ಸರ್ಕಾರವು ಈ ಮೂರು ಬೆಳೆಗಳಿಗೆ ವಿಶೇಷ ಪ್ಯಾಕೇಜ್ ಅಥವಾ ಪ್ರತ್ಯೇಕ ಮಂಡಳಿ ಘೋಷಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

