Friday, December 19, 2025

SMATಯಲ್ಲಿ ಭರ್ಜರಿ ಬ್ಯಾಟ್ ಬೀಸಿದ ಇಶಾನ್ ಕಿಶನ್: ಮತ್ತೆ ಟೀಮ್ ಇಂಡಿಯಾ ಸೇರುವ ನಿರೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಕ್ರಿಕೆಟ್ ಅಭಿಮಾನಿಗಳಿಗೆ ಸ್ಮರಣೀಯ ಕ್ಷಣಗಳನ್ನು ನೀಡಿದ್ದು, ಜಾರ್ಖಂಡ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಐತಿಹಾಸಿಕ ಸಾಧನೆಯ ಹಿಂದಿನ ಪ್ರಮುಖ ಶಕ್ತಿ ನಾಯಕ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್. ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿದ ಕಿಶನ್, ಫೈನಲ್ ಪಂದ್ಯದಲ್ಲೇ ದಾಖಲೆ ನಿರ್ಮಿಸಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

ಇನ್ನಿಂಗ್ಸ್‌ನಲ್ಲೇ 10 ಸಿಕ್ಸರ್‌ಗಳನ್ನು ಬಾರಿಸಿದ ಇಶಾನ್ ಕಿಶನ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎಂಬ ಗೌರವಕ್ಕೂ ಪಾತ್ರರಾದರು. ಅವರ ದಿಟ್ಟ ಆಟದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ 262 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಈ ಭಾರೀ ಗುರಿಯನ್ನು ಬೆನ್ನಟ್ಟಿದ ಹರಿಯಾಣ ತಂಡ 193 ರನ್‌ಗಳಿಗೆ ಸೀಮಿತವಾಯಿತು.

ಈ ಆವೃತ್ತಿಯ ಟೂರ್ನಿಯಲ್ಲಿ ಇಶಾನ್ ಕಿಶನ್ ನಿರಂತರವಾಗಿ ಗಮನ ಸೆಳೆದರು. ಒಟ್ಟಾರೆ 516 ರನ್‌ಗಳನ್ನು ಕಲೆಹಾಕಿದ ಅವರು, ಎರಡು ಶತಕಗಳೊಂದಿಗೆ ಸರಿಸುಮಾರು 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. 33 ಸಿಕ್ಸರ್‌ಗಳು ಮತ್ತು 50ಕ್ಕೂ ಹೆಚ್ಚು ಬೌಂಡರಿಗಳು ಅವರ ಬ್ಯಾಟಿಂಗ್ ಪ್ರಭಾವವನ್ನು ತೋರಿಸುತ್ತವೆ.

ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾ ಆಯ್ಕೆಯಿಂದ ಹೊರಗಿರುವ ಇಶಾನ್ ಕಿಶನ್, ಈ ಪ್ರದರ್ಶನದ ಮೂಲಕ ಆಯ್ಕೆದಾರರ ಗಮನವನ್ನು ಮತ್ತೆ ಸೆಳೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ನೀಡುತ್ತಿರುವ ಈ ಸ್ಥಿರ ಪ್ರದರ್ಶನ, ಅವರಿಗೆ ಟೀಮ್ ಇಂಡಿಯಾದ ಬಾಗಿಲು ಮತ್ತೆ ತೆರೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ.

error: Content is protected !!