Friday, December 19, 2025

ಬಿಹಾರ ಸಿಎಂ ನಿತೀಶ್ ಕುಮಾರ್​​ಗೆ ಪಾಕಿಸ್ತಾನದ ಗ್ಯಾಂಗ್​​ಸ್ಟರ್​​ನಿಂದ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿವಾದದಲ್ಲಿ ಸಿಲುಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯುವ ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆಯುವ ಮೂಲಕ ಸಾರ್ವಜನಿಕ ವೇದಿಕೆಯಲ್ಲೇ ಆ ಮಹಿಳೆಗೆ ಮುಜುಗರ ತಂದಿದ್ದರು. ಈ ಘಟನೆಗೆ ವಿಪಕ್ಷವಾದ ಆರ್​​ಜೆಡಿ ಸೇರಿದಂತೆ ಅನೇಕ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇದುವರೆಗೂ ನಿತೀಶ್ ಕುಮಾರ್ ಈ ವಿಷಯದಲ್ಲಿ ಕ್ಷಮಾಪಣೆ ಕೇಳಿಲ್ಲ, ಸ್ಪಷ್ಟನೆಯನ್ನೂ ನೀಡಿಲ್ಲ.

ಇದೀಗ ಈ ಹಿಜಾಬ್ ವಿವಾದ ಪಾಕಿಸ್ತಾನದ ಅಂಗಳವನ್ನೂ ತಲುಪಿದೆ. ಮಹಿಳೆಯ ಹಿಜಾಬ್ ಎಳೆದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪಾಕಿಸ್ತಾನ ಮೂಲದ ಗ್ಯಾಂಗ್​ಸ್ಟರ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.

ಸರ್ಕಾರಿ ಸಮಾರಂಭವೊಂದರಲ್ಲಿ ಸಿಎಂ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಕಿತ್ತುಹಾಕುತ್ತಿರುವ ವಿಡಿಯೋ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ನಿತೀಶ್ ಕುಮಾರ್ ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯೆಗೆ ನೇಮಕಾತಿ ಪತ್ರವನ್ನು ನೀಡುವಾಗ ಅವರ ಮುಖದಿಂದ ‘ಹಿಜಾಬ್’ ಅನ್ನು ಎಳೆದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಅವರಿಗೆ ಪಾಕಿಸ್ತಾನದಿಂದ ಬೆದರಿಕೆ ಬಂದಿದೆ. ಹೀಗಾಗಿ, ಪಾಟ್ನಾ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ ಮತ್ತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ನಿತೀಶ್ ಕುಮಾರ್ ಅವರಿಗೆ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ.

ಹಿಜಾಬ್​​ಗೆ ಕೈಹಾಕಿದ ನೀವು ಅದಕ್ಕೆ ಸೂಕ್ತವಾದ ಬೆಲೆ ತೆರಬೇಕಾಗುತ್ತದೆ. ಮೊದಲೇ ಎಚ್ಚರಿಕೆ ನೀಡಲಿಲ್ಲ ಎನ್ನಬೇಡಿ. ಅದಕ್ಕಾಗಿಯೇ ಮೊದಲೇ ಹೇಳುತ್ತಿದ್ದೇನೆ. ಹಿಜಾಬ್ ಎಳೆದ ಆ ವ್ಯಕ್ತಿಗೆ ಆ ಮುಸ್ಲಿಂ ಯುವತಿಯ ಬಳಿ ಕ್ಷಮೆ ಯಾಚಿಸಲು ಇನ್ನೂ ಸಮಯವಿದೆ. ಮುಂದೆ ಏನಾದರೂ ತೊಂದರೆಯಾದರೆ ಎಚ್ಚರಿಕೆ ನೀಡಿರಲಿಲ್ಲ ಎಂದು ಹೇಳಬೇಡಿ ಎಂದು ಆ ವ್ಯಕ್ತಿ ವೀಡಿಯೊದಲ್ಲಿ ಹೇಳಿದ್ದಾರೆ.

error: Content is protected !!