Saturday, December 20, 2025

ಮುಸ್ಲಿಂ ವ್ಯಕ್ತಿ ಹಿಂದು ಮಹಿಳೆಯ ಮುಸುಕನ್ನು ಹಿಡಿದೆಳೆದರೆ ಏನಾಗುತ್ತಿತ್ತು?: ನಿತೀಶ್‌ ವಿರುದ್ಧ ಒಮರ್‌ ಅಬ್ದುಲ್ಲಾ ಟೀಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ಮುಸ್ಲಿಂ ವೈದ್ಯೆಯ ಹಿಜಾಬ್‌ ಹಿಡಿದೆಳೆದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವರ್ತನೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ, ಮುಸ್ಲಿಂ ವ್ಯಕ್ತಿಯೋರ್ವ ಹಿಂದು ಮಹಿಳೆಯ ಮುಸುಕನ್ನು ಹಿಡಿದೆಳೆದಿದ್ದರೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.

ನಿತೀಶ್‌ ಕುಮಾರ್‌ ವರ್ತನೆಯನ್ನು ಸಮರ್ಥಸಿಕೊಂಡಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, “ಸರ್ಕಾರಿ ಕೆಲಸದ ದೃಢೀಕರಣ ಪತ್ರ ಪಡೆಯುವಾಗ ಮುಖ ತೋರಿಸಲು ಏನು ಸಮಸ್ಯೆ? ಭಾರತ ಇಸ್ಲಾಮಿಕ್‌ ರಾಷ್ಟ್ರವಲ್ಲ. ಅಲ್ಲದೇ ಅದೇ ಯುವತಿ ಪಾಸ್‌ಪೋರ್ಟ್‌ ಪಡೆಯಲು ಮತ್ತು ಏರ್‌ಪೋರ್ಟ್‌ಗೆ ಹೋದಾಗ ತನ್ನ ಮುಖವನ್ನು ತೋರಿಸುವುದಿಲ್ಲವೇ?” ಎಂದು ಪ್ರಶ್ನಿಸಿದ್ದರು.

ಬಿಜೆಪಿ ನಾಯಕರ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಒಮರ್‌ ಅಬ್ದುಲ್ಲಾ, “ಇಂತಹ ಹೇಳಿಕೆಗಳನ್ನು ಕೇಳಿದಾಗ ಯಾವುದೇ ಮಹಿಳೆಯ ಸುರಕ್ಷತೆ ಬಗ್ಗೆ ಸಹಜವಾಗಿ ಚಿಂತೆ ಮೂಡುತ್ತದೆ. ಒಂದು ವೇಳೆ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದು ಮಹಿಳೆಯ ಮುಸುಕನ್ನು ಹಿಡಿದೆಳೆದರೆ ಆಗಲೂ ಇದೇ ರೀತಿಯ ಸಮರ್ಥನೆ ಮಾಡಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳು ಕೂಡ ನಿತೀಶ್ ಕುಮಾರ್ ಅವರಿಂದ ಬೇಷರತ್ ಕ್ಷಮೆ‌ಗೆ ಪಟ್ಟು ಹಿಡಿದಿವೆ.

ಆಯುಷ್‌ ವೈದ್ಯರಿಗೆ ನೌಕರಿ ಪ್ರಮಾಣಪತ್ರ ಕೊಡುವ ಸಮಾರಂಭದಲ್ಲಿ, ಮುಸ್ಲಿಂ ವೈದ್ಯೆ ಧರಿಸಿದ್ದ ಹಿಜಾಬ್‌ನ್ನು ನಿತೀಶ್‌ ಕುಮಾರ್‌ ತೆಗೆಯಲು ಪ್ರಯತ್ನಿಸಿದ್ದರು. ನಿತೀಶ್‌ ಕುಮಾರ್‌ ಅವರ ವರ್ತನೆ ತೀವ್ರ ಟೀಕೆ ವ್ಯಕ್ತವಾಗಿತ್ತು.

error: Content is protected !!