Saturday, December 20, 2025

WEATHER | ಬಿಸಿಲ ನಾಡಿನಲ್ಲೂ ಹಿಮದ ಅನುಭವ! 5 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ

ರಾಜ್ಯದಾದ್ಯಂತ ಶೀತಗಾಳಿಯ ಅಬ್ಬರ ಜೋರಾಗಿದ್ದು, ಮೈಕೊರೆಯುವ ಚಳಿಗೆ ಜನಜೀವನ ತತ್ತರಿಸಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿಯ ಪ್ರಭಾವ ಮತ್ತಷ್ಟು ಹೆಚ್ಚಾಗಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ.

ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಚಳಿ ಅತಿಯಾಗಲಿದ್ದು, ಈ ಭಾಗಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಿರಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದ್ದು, ಕನಿಷ್ಠ ತಾಪಮಾನ 15°C ಆಸುಪಾಸಿನಲ್ಲಿರಲಿದೆ. ಮಂಡ್ಯ, ಮೈಸೂರು, ಕೋಲಾರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸ್ತುತ ಒಣ ಹವೆಯ ವಾತಾವರಣ ಇರಲಿದೆ ಎಂದು ಇಲಾಖೆ ತಿಳಿಸಿದೆ.

error: Content is protected !!