ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ–ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವನ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಕಣಕ್ಕಿಳಿದಿದ್ದು, ಅದರ ಪರಿಣಾಮ ಆರಂಭದಲ್ಲೇ ಕಾಣಿಸಿಕೊಂಡಿತು. ಶುಭ್‌ಮನ್ ಗಿಲ್‌ಗೆ ವಿಶ್ರಾಂತಿ ನೀಡಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದ್ದು, ಅವರು ಆರಂಭಿಕನಾಗಿ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು.
ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಇನಿಂಗ್ಸ್‌ಗೆ ಚುರುಕಿನ ಆರಂಭ ನೀಡಿತು. ಮೊದಲ ಐದು ಓವರ್‌ಗಳಲ್ಲೇ ಭಾರತ 50 ರನ್ ಗಡಿ ದಾಟಿ, ದಕ್ಷಿಣ ಆಫ್ರಿಕಾ ಬೌಲರ್‌ಗಳ ಮೇಲೆ ಒತ್ತಡ ಹೇರುತ್ತಿತ್ತು. ಅಭಿಷೇಕ್ ಔಟಾದ ಬಳಿಕವೂ ಸಂಜು ಬ್ಯಾಟ್ ನಿಧಾನಗೊಳಿಸದೇ ಸ್ಕೋರ್‌ನ್ನು ವೇಗವಾಗಿ ಮುಂದೂಡಿದರು. ಇದೇ ವೇಳೆ 9ನೇ ಓವರ್‌ನಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಡೊನೊವನ್ ಫೆರೈರಾ ಎಸೆತವನ್ನು ಬಲವಾಗಿ ಹೊಡೆದ ಸಂಜು ಚೆಂಡು ನೇರವಾಗಿ ನಾನ್‌ಸ್ಟ್ರೈಕರ್ ಎಂಡ್‌ನಲ್ಲಿದ್ದ ಅಂಪೈರ್ ರೋಹನ್ ಪಂಡಿತ್ ಅವರ ಕಾಲಿಗೆ ತಗುಲಿತು. ನೋವಿನಿಂದ ಅವರು ನೆಲಕ್ಕುರುಳಿದ ಪರಿಣಾಮ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.
ಫಿಸಿಯೋಗಳ ಪರಿಶೀಲನೆಯ ನಂತರ ಅಂಪೈರ್ ಪುನಃ ಕರ್ತವ್ಯಕ್ಕೆ ಮರಳಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟರು. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸರ್ ಬೌಂಡರಿಯಲ್ಲಿದ್ದ ಕ್ಯಾಮೆರಾಮ್ಯಾನ್‌ಗೆ ತಗುಲಿದ ಘಟನೆ ಕೂಡ ಸಂಭವಿಸಿತು. ಸಣ್ಣ ಗಾಯವಾದರೂ ತಕ್ಷಣ ಚಿಕಿತ್ಸೆ ನೀಡಲಾಯಿತು. ಈ ಎಲ್ಲಾ ಕ್ಷಣಗಳು ಪಂದ್ಯಕ್ಕೆ ಹೆಚ್ಚುವರಿ ಕುತೂಹಲ ತಂದುಕೊಟ್ಟಿರುವುದಂತೂ ನಿಜ.

