Saturday, December 20, 2025

ದಿವಾಳಿಯಾಗಿರೋ ಪಾಕ್ ಗೆ ಮತ್ತೊಂದು ಶಾಕ್: ಗರ್ಭನಿರೋಧಕ ವಸ್ತುಗಳ ಟ್ಯಾಕ್ಸ್ ಕಮ್ಮಿ ಮಾಡಿ ಎಂದಿದ್ದಕ್ಕೆ IMF ಛೀಮಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ಥಿಕ ಸಂಕಷ್ಟದಿಂದ ಈಗಾಗಲೇ ಒತ್ತಡದಲ್ಲಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಮತ್ತೊಂದು ಹಿನ್ನಡೆ ಅನುಭವಿಸಿದೆ. ತೆರಿಗೆ ರಿಯಾಯಿತಿ ಮೂಲಕ ಜನರ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಶೆಹಬಾಜ್ ಷರೀಫ್ ಸರ್ಕಾರದ ಪ್ರಯತ್ನಕ್ಕೆ ಬ್ರೇಕ್ ಹಾಕಿರುವ ಐಎಂಎಫ್, ಗರ್ಭನಿರೋಧಕ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತದ ಬೇಡಿಕೆಯನ್ನು ತಿರಸ್ಕರಿಸಿದೆ. ಇದರ ಪರಿಣಾಮವಾಗಿ ಜನನ ನಿಯಂತ್ರಣಕ್ಕೆ ಬಳಸುವ ಅವಶ್ಯಕ ವಸ್ತುಗಳು ಪಾಕಿಸ್ತಾನದಲ್ಲಿ ಇನ್ನಷ್ಟು ದುಬಾರಿಯಾಗಿವೆ.

ಫೆಡರಲ್ ಬೋರ್ಡ್ ಆಫ್ ರೆವಿನ್ಯೂ ಮೂಲಕ ಸಲ್ಲಿಸಿದ್ದ 18 ಶೇಕಡಾ ಮಾರಾಟ ತೆರಿಗೆ ಕಡಿತದ ಪ್ರಸ್ತಾವನೆಯನ್ನು ಐಎಂಎಫ್ ಒಪ್ಪಲಿಲ್ಲ. ಆರ್ಥಿಕ ವರ್ಷದ ಮಧ್ಯದಲ್ಲಿ ತೆರಿಗೆ ವಿನಾಯಿತಿಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿರುವ ಐಎಂಎಫ್, ಇಂತಹ ಬದಲಾವಣೆಗಳನ್ನು ಬಜೆಟ್ ಹಂತದಲ್ಲೇ ಚರ್ಚಿಸಬೇಕು ಎಂದು ಸೂಚಿಸಿದೆ. ಪಾಕಿಸ್ತಾನ ತನ್ನ ಆರ್ಥಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಐಎಂಎಫ್ ಸಾಲಗಳ ಮೇಲೆ ಅವಲಂಬಿತವಾಗಿರುವುದರಿಂದ ಈ ತೀರ್ಮಾನವನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕಾದ ಸ್ಥಿತಿಯಲ್ಲಿದೆ.

ಪಾಕಿಸ್ತಾನ ಪ್ರಸ್ತುತ 37 ತಿಂಗಳ ಸಾಲ ಕಾರ್ಯಕ್ರಮದ ಅಡಿಯಲ್ಲಿ ಐಎಂಎಫ್ ನೆರವು ಪಡೆಯುತ್ತಿದ್ದು, ಈಗಾಗಲೇ ಬಿಲಿಯನ್‌ಗಳಷ್ಟು ಡಾಲರ್ ಬಿಡುಗಡೆ ಆಗಿದೆ. ಆದರೆ ಈ ನೆರವು ಕಠಿಣ ಷರತ್ತುಗಳೊಂದಿಗೆ ಬರುತ್ತಿದ್ದು, ತೆರಿಗೆ ಸಂಗ್ರಹ ಮತ್ತು ಹಣಕಾಸು ಶಿಸ್ತು ಪಾಲನೆಗೆ ಹೆಚ್ಚಿನ ಒತ್ತಡವಿದೆ. ಇದೇ ವೇಳೆ ದೇಶದಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗರ್ಭನಿರೋಧಕ ವಸ್ತುಗಳ ದುಬಾರಿತನವು ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೊಸ ಚಿಂತೆಗಳನ್ನು ಹುಟ್ಟಿಸಿದೆ.

error: Content is protected !!