ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವ್ಯಾಪಿ ಹರಡಿರುವ ಭಾರೀ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿರುವ ದಾವಣಗೆರೆ ಸೆನ್ ಠಾಣೆ ಪೊಲೀಸರು, ಪ್ರಕರಣದ ಗಂಭೀರತೆಯನ್ನು ಗಮನಿಸಿ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದ್ದಾರೆ.
ಆರಂಭದಲ್ಲಿ ಕೇವಲ 150 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದ ಈ ಪ್ರಕರಣದಲ್ಲಿ, ಇದೀಗ 1,000 ಕೋಟಿ ರೂಪಾಯಿಗೂ ಅಧಿಕ ಹಣ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣ ರಾಜ್ಯದ ದೊಡ್ಡ ಸೈಬರ್ ಅಪರಾಧಗಳ ಪೈಕಿ ಒಂದಾಗಿ ಗುರುತಿಸಲಾಗಿದೆ..
ಆಗಸ್ಟ್ 29ರಂದು ಪ್ರಮೋದ್ ಎಂಬಾತ 52 ಲಕ್ಷ ರೂ. ಸೈಬರ್ ವಂಚನೆಗೆ ಒಳಗಾಗಿದ್ದಾಗಿ ದೂರು ನೀಡಿದ ಬಳಿಕ ತನಿಖೆ ಆರಂಭಗೊಂಡಿತ್ತು. ಈ ಸಂಬಂಧ ಬೇಲೂರು ಮೂಲದ ಸೈಯದ್ ಅರ್ಫಾತ್ ಹಾಗೂ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂಟ್ ಅವರನ್ನು ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಉದ್ಯಮವೇ ಇಲ್ಲದೇ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಕರೆಂಟ್ ಅಕೌಂಟ್ ತೆರೆಯಿಸಿ ಮಾರಾಟ ಮಾಡುತ್ತಿದ್ದ ಜಾಲ ಬಯಲಾಗಿತ್ತು.
ಆರೋಪಿಗಳ ಖಾತೆಗಳಿಗೆ ದೇಶದ ವಿವಿಧ ಭಾಗಗಳಿಂದ ಹಾಗೂ ದುಬೈನಿಂದಲೂ ಅಪಾರ ಪ್ರಮಾಣದ ಹಣ ಜಮೆಯಾಗಿದ್ದು, ಈ ಹಣ ಆನ್‌ಲೈನ್ ಗೇಮಿಂಗ್, ಗ್ಯಾಂಬ್ಲಿಂಗ್ ಮತ್ತು ನಕಲಿ ಟ್ರೇಡಿಂಗ್ ಮೂಲಕ ಸಂಗ್ರಹವಾಗಿರುವ ಶಂಕೆ ವ್ಯಕ್ತವಾಗಿದೆ.
ತನಿಖೆಯಲ್ಲಿ ದೂರುದಾರ ಪ್ರಮೋದ್ ಕೂಡ ಈ ವಂಚನೆ ಜಾಲದ ಭಾಗವಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

