Sunday, December 21, 2025

ಕುಂದಾಪುರ ನ್ಯಾಯಾಲಯಕ್ಕೆ ಶಂಕಿತ ನಕ್ಸಲರು ಹಾಜರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಹಾಗೂ ಬೆಂಗಳೂರಿನ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ನಕ್ಸಲ್‌ವಾದಿಗಳನ್ನು ಶನಿವಾರ ಬಿಗಿ ಭದ್ರತೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಶಂಕರನಾರಾಯಣ ಹಾಗೂ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ನಕ್ಸಲ್ ಸಂಬಂಧಿ ಹಾಗೂ ಯುಪಿಎ ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಖುದ್ದು ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್‌ ಶೇಖ್ ಅವರೆದುರು ಹಾಜರು ಪಡಿಸಲಾಯಿತು.

ನ್ಯಾಯಾಂಗ ಬಂಧನದಲ್ಲಿದ್ದು ಬೆಂಗಳೂರು ಜೈಲಿನಲ್ಲಿರುವ ಮುಂಡುಗಾರು ಲತಾ, ಕನ್ಯಾಕುಮಾರಿ,ತ್ರಿಶೂರ್ ಜೈಲಿನಲ್ಲಿರುವ ಸಾವಿತ್ರಿ, ಮಹೇಶ್ ಎನ್ನುವರನ್ನು ನ್ಯಾಯಾಲಯದೆದುರು ಖುದ್ದು ಹಾಜರುಪಡಿಸಿದ್ದು ವಿಡಿಯೋ ಕಾನ್ಪ್‌ರೆನ್ಸ್ ಮೂಲಕ ಸುರೇಶ್ ವಿಚಾರಣೆ ನಡೆಸಲಾಯಿತು. ಜಾಮೀನು ಮೇಲೆ ಹೊರಗಿರುವ ತೊಂಬಟ್ಟು ಲಕ್ಷ್ಮಿ ಅವರು ಹಾಜರಾಗಿದ್ದರು. ಈ ಎಲ್ಲಾ ಶಂಕಿತ ನಕ್ಸಲ್‌ವಾದಿಗಳಿಗೆ ಸಂಬಂಧಿಸಿದಂತೆ ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಪ್ರಕರಣಗಳ ದೋಷಾರೋಪಣೆಗಳ ದೃಡೀಕರಣ (ಚಾರ್ಜ್ ಫ್ರೇಮ್) ಪ್ರಕ್ರಿಯೆ ನಡೆಸಿದ್ದು ಆರೋಪಿಗಳ ವಿಚಾರಣೆಗೆ ಪ್ರಾಸಿಕ್ಯೂಶನ್‌ಗೆ ಮುಂದಿನ ದಿನಾಂಕ ನಿಗದಿಪಡಿಸಿ ನ್ಯಾಯಾಲಯವು ಆದೇಶಿಸಿದೆ ಎಂದು ತಿಳಿದುಬಂದಿದೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಇಂದಿರಾ ನಾಯಕ್ ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್‌ಪಿ ಹೆಚ್.ಡಿ.ಕುಲಕರ್ಣಿ, ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ ಹಾಗೂ ಸಂಬಂಧಿತ ಠಾಣಾ ಪೊಲೀಸ್ ಉಪನಿರೀಕ್ಷಕರು, ಸಿಬ್ಬಂದಿಗಳ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕೇರಳ, ಬೆಂಗಳೂರು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಆರೋಪಿಗಳನ್ನು ಕರೆತರಲಾಗಿತ್ತು. ನ್ಯಾಯಾಲಯದ ಪ್ರಕ್ರಿಯೆ ಬಳಿಕ ಎಲ್ಲರನ್ನೂ ಮರಳಿ ನ್ಯಾಯಾಂಗ ಬಂಧನದ ಜೈಲುಗಳಿಗೆ ಕಳುಹಿಸಲಾಗಿದೆ.

error: Content is protected !!