Saturday, September 6, 2025

ಕೇಸರಿಮಯಗೊಂಡ ಬೆಂಗಳೂರು: ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವರ ಭೇಟಿ, ಪರಿಶೀಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿದ್ದು, ನಗರದಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಮೇಖ್ರಿ ಸರ್ಕಲ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕೇಸರಿ ಬಾವುಟಗಳು, ಪ್ರಧಾನಿ ಮೋದಿ ಅವರ ಫೋಟೋಗಳು ಹಾಗೂ ಬ್ಯಾರಿಕೇಡ್‌ಗಳಿಂದ ಸಿಂಗಾರಗೊಂಡಿದೆ. ಬಿಜೆಪಿ ಕಾರ್ಯಕರ್ತರು ವಿಶೇಷ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ.

ಮಧ್ಯರಾತ್ರಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ, ಪ್ರಧಾನಿ ಭೇಟಿಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಿದರು. ಇಂದು ಪ್ರಧಾನಿ ಮೋದಿ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲುಗಳು ಬೆಂಗಳೂರು–ಬೆಳಗಾವಿ, ನಾಗ್ಪುರದ ಅಜ್ನಿ–ಪೂಣೆ ಹಾಗೂ ಅಮೃತಸರ–ಶ್ರೀ ಮಾತಾ ವೈಷ್ಣೋ ದೇವಿ ಕಟ್ರಾ ಮಾರ್ಗಗಳಲ್ಲಿ ಸಂಚರಿಸಲಿವೆ.

ಈ ಕುರಿತು ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ರೈಲುಗಳು ಕಡಿಮೆ ದರದಲ್ಲಿ, ವೇಗವಾಗಿ ಹಾಗೂ ಆರಾಮದಾಯಕ ಪ್ರಯಾಣ ಒದಗಿಸುವುದಾಗಿ ತಿಳಿಸಿದರು. ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿಗಾಗಿ 7,564 ಕೋಟಿ ರೂ. ಅನುದಾನ ನೀಡಲಾಗಿದ್ದು, ಹಾಸನ–ಬೆಂಗಳೂರು, ಶಿವಾನಿ–ಬೀರೂರು, ಹೊಸದುರ್ಗ–ಚಿಕ್ಕಜಾಜೂರು ಮಾರ್ಗಗಳ ಡಬ್ಲಿಂಗ್ ಕಾರ್ಯ ಪೂರ್ಣಗೊಂಡಿದೆ. ತುಮಕೂರು–ಚಿತ್ರದುರ್ಗ ನೇರ ಮಾರ್ಗ ಸೇರಿದಂತೆ ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ.

ಪ್ರಧಾನಿ ಮೋದಿ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೂ ಚಾಲನೆ ನೀಡಲಿದ್ದಾರೆ. ಬೆಂಗಳೂರು ದೇಶದ ಪ್ರಮುಖ ಐಟಿ ನಗರವಾಗಿರುವುದರಿಂದ, ಮೆಟ್ರೋ ಸೇವೆಯ ವಿಸ್ತರಣೆ ನಾಗರಿಕರಿಗೆ ವೇಗದ ಹಾಗೂ ಸುಲಭ ಪ್ರಯಾಣಕ್ಕೆ ನೆರವಾಗಲಿದೆ ಎಂದು ಸಚಿವರು ಹೇಳಿದರು.

ನಗರದಲ್ಲಿ ಪ್ರಧಾನಿ ಸಂಚಾರ ಮಾರ್ಗದುದ್ದಕ್ಕೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪ್ರತಿ ಜಂಕ್ಷನ್‌ನಲ್ಲಿ 100 ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದು, ಟ್ರಾಫಿಕ್ ನಿರ್ವಹಣೆಗೆ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ