ರಾಜ್ಯದಾದ್ಯಂತ ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ ಕೆಲವು ದಿನಗಳು ರಾಜ್ಯದ ಹಲವೆಡೆ ತೀವ್ರ ಶೀತಗಾಳಿ ಬೀಸುವ ಸಾಧ್ಯತೆ ಇದೆ.
ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿದಂತೆ ಒಟ್ಟು 7 ಜಿಲ್ಲೆಗಳಿಗೆ ಈ ಸೂಚನೆ ನೀಡಲಾಗಿದೆ. ಇಲ್ಲಿ ತೀವ್ರ ಶೀತಗಾಳಿ ಬೀಸುವ ಸಂಭವವಿದೆ.
ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ಒಟ್ಟು 15 ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಕರಾವಳಿ ಮತ್ತು ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಕನಿಷ್ಠ ತಾಪಮಾನ 15°C ರ ಆಸುಪಾಸಿನಲ್ಲಿದೆ. ಚಳಿಯ ಜೊತೆಗೆ ಶೀತ ಮಾರುತಗಳು ಜನರನ್ನು ಮನೆಯಿಂದ ಹೊರಬರದಂತೆ ಮಾಡಿವೆ.

