ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಸಾವಿರಾರು ಭಾರತೀಯ H-1B ವೀಸಾ ಹೊಂದಿರುವವರು ಅಚಾನಕ್ ಉಂಟಾದ ವೀಸಾ ವಿಳಂಬದ ಕಾರಣದಿಂದ ಭಾರತದಲ್ಲೇ ಸಿಲುಕಿದ್ದಾರೆ. ವೀಸಾ ನವೀಕರಣಕ್ಕಾಗಿ ಭಾರತಕ್ಕೆ ಬಂದಿದ್ದ ಈ ಉದ್ಯೋಗಿಗಳ ಅಪಾಯಿಂಟ್‌ಮೆಂಟ್‌ಗಳನ್ನು ಅಮೆರಿಕದ ಕಾನ್ಸುಲರ್ ಕಚೇರಿಗಳು ಹಠಾತ್ ರದ್ದುಗೊಳಿಸಿ, ತಿಂಗಳುಗಳ ಬಳಿಕ ಮರುನಿಗದಿಪಡಿಸಿರುವುದು ಗಂಭೀರ ಸಮಸ್ಯೆಗೆ ಕಾರಣವಾಗಿದೆ. ವಲಸೆ ತಜ್ಞರ ಪ್ರಕಾರ, ಟ್ರಂಪ್ ಆಡಳಿತ ಜಾರಿಗೆ ತಂದ ಹೊಸ ಹಾಗೂ ಕಠಿಣ ನಿಯಮಗಳೇ ಈ ಅವ್ಯವಸ್ಥೆಗೆ ಪ್ರಮುಖ ಕಾರಣವಾಗಿದೆ.
ಇತ್ತೀಚೆಗೆ ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್ ಪರಿಚಯಿಸಿದ ವಿಸ್ತೃತ ಪರಿಶೀಲನಾ ಕ್ರಮಗಳಿಂದ ವೀಸಾ ಸಂದರ್ಶನಗಳ ಕಾಯುವ ಅವಧಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಶೇಷವಾಗಿ ಅರ್ಜಿದಾರರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಆಳವಾದ ಪರಿಶೀಲನೆ ಕಡ್ಡಾಯವಾಗಿದ್ದು, ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಭಾರತಕ್ಕೆ ಬಂದ ಅನೇಕ H-1B ಮತ್ತು H-4 ವೀಸಾ ಹೊಂದಿರುವವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮರುನಿಗದಿಪಡಿಸಿದ ಕೆಲವು ಸಂದರ್ಶನ ದಿನಾಂಕಗಳು 2026 ಅಥವಾ 2027ರವರೆಗೂ ಹೋಗಿರುವುದು ಆತಂಕ ಹೆಚ್ಚಿಸಿದೆ.
ಬಹುಪಾಲು ಸಿಲುಕಿರುವವರು 30 ಮತ್ತು 40ರ ಹರೆಯದ ಅನುಭವೀ ಟೆಕ್ ವೃತ್ತಿಪರರು. ಉದ್ಯೋಗ ಕಳೆದುಕೊಳ್ಳುವ ಭಯ, ಕುಟುಂಬದಿಂದ ದೂರವಿರುವ ಒತ್ತಡ ಮತ್ತು ಭವಿಷ್ಯದ ಅನಿಶ್ಚಿತತೆ ಅವರನ್ನು ಕಾಡುತ್ತಿದೆ. ಕಂಪನಿಗಳಿಗೂ ಈ ಸ್ಥಿತಿ ತಲೆನೋವಾಗಿ ಪರಿಣಮಿಸಿದ್ದು, ಗೂಗಲ್ ಸೇರಿದಂತೆ ಹಲವು ಸಂಸ್ಥೆಗಳು ತಮ್ಮ ವಿದೇಶಿ ಉದ್ಯೋಗಿಗಳಿಗೆ ಪ್ರಯಾಣದ ಬಗ್ಗೆ ಎಚ್ಚರಿಕೆ ನೀಡಿವೆ. H-1B ವೀಸಾದಲ್ಲಿ ಭಾರತೀಯರ ಪಾಲು ಹೆಚ್ಚಿರುವ ಹಿನ್ನೆಲೆ, ಈ ಸಮಸ್ಯೆ ಭಾರತ–ಅಮೆರಿಕ ಸಂಬಂಧಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

