ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಡಿಜಿಟಲ್ ವೇದಿಕೆಯಲ್ಲಿ ಖ್ಯಾತಿ ಪಡೆದ ಯೂಟ್ಯೂಬರ್ ಒಬ್ಬರ ಮೇಲೆ ಜಾರಿ ನಿರ್ದೇಶನಾಲಯದ (ED) ದಾಳಿ ನಡೆದಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಉನ್ನಾವೊ ಮೂಲದ ಯೂಟ್ಯೂಬರ್ ಅನುರಾಗ್ ದ್ವಿವೇದಿ ಮನೆ ಸೇರಿದಂತೆ ಅವರೊಂದಿಗೆ ಸಂಬಂಧ ಹೊಂದಿರುವ ಒಟ್ಟು ಒಂಬತ್ತು ಸ್ಥಳಗಳ ಮೇಲೆ ಇ.ಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಸುಮಾರು ಹತ್ತು ಗಂಟೆಗಳ ಕಾಲ ನಡೆದ ಪರಿಶೀಲನೆಯಲ್ಲಿ ಆನ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಜೂಜಾಟ ಅಪ್ಲಿಕೇಶನ್‌ಗಳಿಂದ ಬಂದ ಹಣದ ಸುಳಿವು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ಪ್ರಕಾರ, ಅನುರಾಗ್ ದ್ವಿವೇದಿ ಸ್ಕೈ ಎಕ್ಸ್‌ಚೇಂಜ್ ಸೇರಿದಂತೆ ಹಲವು ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುವ ಮೂಲಕ ಭಾರೀ ಆದಾಯ ಗಳಿಸಿದ್ದಾರಂತೆ. ಈ ಹಣದಿಂದ ದುಬೈನಲ್ಲಿ ಆಸ್ತಿಗಳನ್ನು ಖರೀದಿಸಿದ್ದು, ಲಂಬೋರ್ಘಿನಿ ಉರುಸ್, ಬಿಎಂಡಬ್ಲ್ಯು, ಮರ್ಸಿಡಿಸ್, ಫಾರ್ಚೂನರ್ ಹಾಗೂ ಥಾರ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಈ ವಾಹನಗಳ ಮೌಲ್ಯವೇ 10 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
ದಾಳಿಯ ವೇಳೆ ಸುಮಾರು 20 ಲಕ್ಷ ರೂ. ನಗದು ಹಾಗೂ ಮಹತ್ವದ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಂಎಲ್‌ಎ 2002ರ ಅಡಿಯಲ್ಲಿ ಅನುರಾಗ್ ಅವರಿಗೆ ಸೇರಿದ ಸುಮಾರು 3 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಇ.ಡಿ ಸ್ಥಗಿತಗೊಳಿಸಿದೆ. ಇದಲ್ಲದೆ, ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ ಹಣದ ವಹಿವಾಟುಗಳ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಇತ್ತೀಚೆಗೆ ದುಬೈನಲ್ಲಿ ಅದ್ಧೂರಿ ಮದುವೆ ಮಾಡಿಕೊಂಡಿದ್ದ ಅನುರಾಗ್, ತನಿಖೆಗೆ ಹಾಜರಾಗದೆ ವಿದೇಶದಲ್ಲೇ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

