Sunday, December 21, 2025

ಬಾಂಗ್ಲಾ ದಂಗೆಯ ರೂವಾರಿ ಇತಿಹಾಸದ ಪುಟಕ್ಕೆ: ಬಿಗಿ ಭದ್ರತೆಯಲ್ಲಿ ಷರೀಫ್ ಉಸ್ಮಾನ್ ಹಾದಿ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ವಿದ್ಯಾರ್ಥಿ ದಂಗೆಯ ಮುಂಚೂಣಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಅಂತ್ಯಕ್ರಿಯೆಯು ಶನಿವಾರ ಸಕಲ ಸರ್ಕಾರಿ ಗೌರವ ಹಾಗೂ ಬಿಗಿ ಭದ್ರತೆಯ ನಡುವೆ ನೆರವೇರಿತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಢಾಕಾದಾದ್ಯಂತ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಹಾದಿ ಅವರ ಹಿರಿಯ ಸಹೋದರ ಅಬು ಬಕರ್ ಜನಾಜಾ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಪ್ರಾರ್ಥನೆಯ ನಂತರ ಪಾರ್ಥಿವ ಶರೀರವನ್ನು ಬಿಗಿ ಭದ್ರತೆಯಲ್ಲಿ ಢಾಕಾ ವಿಶ್ವವಿದ್ಯಾಲಯದ ಆವರಣಕ್ಕೆ ತರಲಾಯಿತು. ಬಾಂಗ್ಲಾದೇಶದ ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಸಮಾಧಿಯ ಸನಿಹದಲ್ಲೇ ಹಾದಿ ಅವರ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆಯ ಮೆರವಣಿಗೆಯ ವೇಳೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಹಾದಿ ಅವರಿಗೆ ವಿದಾಯ ಭಾಷಣದ ಮೂಲಕ ಗೌರವ ಸಲ್ಲಿಸಿದರು. “ಹಾದಿ ಅವರ ಬಲಿದಾನ ವ್ಯರ್ಥವಾಗುವುದಿಲ್ಲ. ಅವರ ಆದರ್ಶಗಳನ್ನು ನಾವು ಎತ್ತಿ ಹಿಡಿಯುತ್ತೇವೆ. ನೀವು ಯಾವುದಕ್ಕಾಗಿ ಹೋರಾಡಿದ್ದೀರೋ, ಆ ಗುರಿಯನ್ನು ನಾವು ಖಂಡಿತವಾಗಿಯೂ ತಲುಪುತ್ತೇವೆ,” ಎಂದು ಭರವಸೆ ನೀಡಿದರು.

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಹೋರಾಟದಲ್ಲಿ ಷರೀಫ್ ಉಸ್ಮಾನ್ ಹಾದಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ವಾರ ಮುಸುಕುಧಾರಿಗಳ ಗುಂಪು ನಡೆಸಿದ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಹಾದಿ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದು, ಇಡೀ ಬಾಂಗ್ಲಾದೇಶ ಇಂದು ಶೋಕ ಸಾಗರದಲ್ಲಿ ಮುಳುಗಿದೆ.

error: Content is protected !!