ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃತಕ ಬುದ್ಧಿಮತ್ತೆಯ ದುರ್ಬಳಕೆ ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸುತ್ತಿರುವ ನಡುವೆ, ಡೀಪ್‌ಫೇಕ್ ವಂಚನೆಯ ಕಾಟ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರವರೆಗೂ ತಲುಪಿದೆ. ರಾಷ್ಟ್ರಪತಿ ಅವರ ಹೆಸರನ್ನು ಬಳಸಿಕೊಂಡು ಸುಳ್ಳು ಹೂಡಿಕೆ ಜಾಹೀರಾತು ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಹಾಗೂ ಸಾಮಾಜಿಕ ಜಾಲತಾಣ ಖಾತೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ ‘ದೋನೆ ಡ್ರಿಮ್ಸ್’ ಎಂಬ ಫೇಸ್‌ಬುಕ್ ಖಾತೆಯಲ್ಲಿ ರಾಷ್ಟ್ರಪತಿ ಮುರ್ಮು ಅವರು ಕೇಂದ್ರ ಸರ್ಕಾರದ ಹಣಕಾಸು ಯೋಜನೆ ಕುರಿತು ಮಾತನಾಡುತ್ತಿರುವಂತೆ ತೋರಿಸುವ ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಆ ವಿಡಿಯೋ ಕೆಳಗೆ ನೀಡಿದ್ದ ಲಿಂಕ್ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಜನರನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗಿತ್ತು.
ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ನಡೆದ ಪ್ರಾಥಮಿಕ ತನಿಖೆಯಲ್ಲಿ, ರಾಷ್ಟ್ರಪತಿ ಅವರ ಮೂಲ ಭಾಷಣದ ದೃಶ್ಯಗಳನ್ನು ಎಐ ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ರೂಪದಲ್ಲಿ ತಿದ್ದುಪಡಿ ಮಾಡಿರುವುದು ದೃಢಪಟ್ಟಿದೆ. ಈ ರೀತಿಯ ಸುಳ್ಳು ಮಾಹಿತಿ ಮೂಲಕ ಸಾರ್ವಜನಿಕರಿಂದ ಹಣ ಪಡೆದು ಆರ್ಥಿಕ ನಷ್ಟ ಉಂಟುಮಾಡುವ ಉದ್ದೇಶವಿದೆ ಎಂಬ ಆರೋಪದ ಮೇರೆಗೆ ಬಿಎನ್‌ಎಸ್ 2023ರ 318(4) ಮತ್ತು 336(4) ಕಲಂಗಳ ಅಡಿಯಲ್ಲಿ ಡಿಸೆಂಬರ್ 12ರಂದು ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಹೆಸರಿನಲ್ಲಿಯೂ ಇಂತಹ ಡೀಪ್‌ಫೇಕ್ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆ, ಎಐ ದುರ್ಬಳಕೆ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಹೆಚ್ಚಾಗಿದೆ.

