ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವಾರದಿಂದ ರೈಲು ಪ್ರಯಾಣ ಸ್ವಲ್ಪ ಹೆಚ್ಚು ಖರ್ಚಾಗಲಿದೆ. ಭಾರತೀಯ ರೈಲ್ವೇಸ್ ದೂರ ಪ್ರಯಾಣದ ಟಿಕೆಟ್ ದರಗಳಲ್ಲಿ ಅಲ್ಪ ಪರಿಷ್ಕರಣೆ ಮಾಡಲು ತೀರ್ಮಾನಿಸಿದ್ದು, ಡಿಸೆಂಬರ್ 26ರಿಂದ ಹೊಸ ದರಗಳು ಜಾರಿಗೆ ಬರಲಿವೆ.
ವರದಿಗಳ ಪ್ರಕಾರ, 215 ಕಿಲೋಮೀಟರ್ ವರೆಗೆ ಪ್ರಯಾಣಿಸುವ ಜನರಲ್ ಕ್ಲಾಸ್ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಆದರೆ ಈ ದೂರ ಮೀರಿದ ಬಳಿಕ, ಪ್ರತಿ ಕಿಲೋಮೀಟರ್‌ಗೆ ಒಂದು ಪೈಸೆಯಷ್ಟು ಹೆಚ್ಚುವರಿ ದರ ವಿಧಿಸಲಾಗುತ್ತದೆ. ಅಂದರೆ, ನೂರು ಕಿಲೋಮೀಟರ್ ಹೆಚ್ಚುವರಿ ಪ್ರಯಾಣಕ್ಕೆ ಒಂದು ರೂ. ಹೆಚ್ಚಾಗುತ್ತದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಪ್ರತಿ ಕಿಲೋಮೀಟರ್‌ಗೆ ಎರಡು ಪೈಸೆ ಹೆಚ್ಚಳ ಜಾರಿಗೆ ಬರಲಿದೆ. ಇದೇ ದರ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ನಾನ್-ಎಸಿ ಕೋಚ್‌ಗಳಿಗೂ ಅನ್ವಯವಾಗುತ್ತದೆ. ಈ ವಿಭಾಗದಲ್ಲಿ ಪ್ರತಿ 50 ಕಿಲೋಮೀಟರ್‌ಗೆ ಒಂದು ರೂ. ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಆದರೆ ಸಬರ್ಬನ್ ರೈಲುಗಳ ಪ್ರಯಾಣಿಕರಿಗೆ ಯಾವುದೇ ಬದಲಾವಣೆ ಇರುವುದಿಲ್ಲ.
ಟಿಕೆಟ್ ದರದಲ್ಲಿ ಮಾಡಿರುವ ಈ ಸಣ್ಣ ಏರಿಕೆಯಿಂದ ರೈಲ್ವೆಗೆ ವಾರ್ಷಿಕವಾಗಿ ಸುಮಾರು 600 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

