ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಬಾಲಕರ ಕೃತ್ಯಕ್ಕೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಿ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಾಲ್ವರು ಬಾಲಕರು 13 ವರ್ಷದೊಳಗಿನವರಾಗಿದ್ದು, ಅವರು ಅಪ್ರಾಪ್ತರಾಗಿರುವ ಕಾರಣ ನೇರ ಕ್ರಮ ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಅವರ ತಾಯಂದಿರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಕಾರ, ಶಾಲೆಗೆ ಹೋಗಿ ಬರುವ ವೇಳೆ ಬಾಲಕಿಗೆ ಅಶ್ಲೀಲ ಮಾತುಗಳ ಮೂಲಕ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಈ ವಿಷಯವನ್ನು ಬಾಲಕಿ ತನ್ನ ತಂದೆಗೆ ತಿಳಿಸಿದ ಬಳಿಕ ಕುಟುಂಬವು ಉಷೈತ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಆರೋಪಿತ ಬಾಲಕರು ಬಾಲಾಪರಾಧಿಗಳಾಗಿರುವುದರಿಂದ, ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದ ಕಾರಣಕ್ಕೆ ತಾಯಂದಿರನ್ನು ಬಂಧಿಸಿ ಮಕ್ಕಳ ಕೃತ್ಯಕ್ಕೆ ಅವರನ್ನು ಹೊಣೆಗಾರನ್ನಾಗಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬಂಧಿತ ಮಹಿಳೆಯರನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ, ನಂತರ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಮಕ್ಕಳಿಗೆ ಸೂಕ್ತ ಸಂಸ್ಕಾರ ನೀಡದಿದ್ದರೆ ಪೋಷಕರಿಗೂ ಹೊಣೆಗಾರಿಕೆ ಇದೆ ಎಂಬ ಸಂದೇಶ ನೀಡುವುದು ಈ ಕ್ರಮದ ಉದ್ದೇಶ ಎಂದು ಎಸ್‌ಎಚ್‌ಒ ಅಜಯ್ ಪಾಲ್ ಸಿಂಗ್ ಹೇಳಿದ್ದಾರೆ.

