ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿನ ಮನೆಯೊಂದರಿಂದ ಇಬ್ಬರು ಭಯೋತ್ಪಾದಕರು ಆಹಾರವನ್ನು ದೋಚಿಕೊಂಡು ಹೋದ ಘಟನೆ ನಡೆದಿದೆ.
ಉಧಂಪುರದ ಚೋರ್ ಮೋಟು ಗ್ರಾಮದ ಮಂಗ್ತು ರಾಮ್ ಎಂಬವರ ಮನೆಗೆ ಇಬ್ಬರು ಅಪರಿಚಿತರು ಬಂದು ಆಹಾರವನ್ನು ದೋಚಿಕೊಂಡು ಹೋಗಿದ್ದಾರೆ ಎನ್ನುವ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಉಧಂಪುರ ಜಿಲ್ಲೆಯ ಗ್ರಾಮವೊಂದಕ್ಕೆ ಶನಿವಾರ ಸಂಜೆ ಬಂದಿದ್ದ ಭಯೋತ್ಪಾದಕರು ಮನೆಯಿಂದ ಆಹಾರವನ್ನು ದೋಚಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದ ಬಳಿಕ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ನಡೆದಿರುವ ಎನ್‌ಕೌಂಟರ್ ಪ್ರದೇಶದಿಂದ ಸುಮಾರು 5 ಕಿ.ಮೀ. ಪಶ್ಚಿಮದಲ್ಲಿರುವ ಮಜಲ್ಟಾ ಪ್ರದೇಶದ ಚೋರ್ ಮೋಟು ಮತ್ತು ಅದರ ಪಕ್ಕದ ಅರಣ್ಯ ಗ್ರಾಮಗಳಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದರು.
ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಾನುವಾರ ಬೆಳಗಿನ ಜಾವದವರೆಗೆ ವಿವಿಧ ಕಡೆಗಳಿಂದ ಏಕಕಾಲದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಯಿತು. ಆದರೆ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ ತಿಂಗಳಾಂತ್ಯದಲ್ಲಿ ಇದೇ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಬಂದು ಆಹಾರ ಕೇಳಿದ್ದರು. ಅದಾಗಿ ಮೂರು ವಾರಗಳ ಬಳಿಕ ಈ ಘಟನೆ ನಡೆದಿದೆ.

