ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಬೆಳಿಗ್ಗೆ ಮಂಜು ಆವರಿಸುತ್ತಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಇಲ್ಲಿಯವರೆಗೆ 200ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದೆ. ಪ್ರತಿಕೂಲ ಹವಾಮಾನ ಮತ್ತು ಮಂಜಿನಿಂದಾಗಿ ಉತ್ತರ ರೈಲ್ವೆಯಿಂದ ಕಾರ್ಯನಿರ್ವಹಿಸುವ 50ಕ್ಕೂ ಹೆಚ್ಚು ರೈಲುಗಳು ವಿಳಂಬವಾಗಿವೆ.
ಕೆಲವು ಭಾಗಗಳಲ್ಲಿ ಮಂಜು ಕವಿದಿರುವುದರಿಂದ ಏನೂ ಕಾಣಿಸುತ್ತಿಲ್ಲ. ಹೀಗಾಗಿ ಆಯ್ದ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬ ಅಥವಾ ಬದಲಾವಣೆಗಳು ಸಂಭವಿಸಬಹುದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಭಾನುವಾರ ಎಚ್ಚರಿಕೆ ನೀಡಿದೆ. ಪ್ರಯಾಣಿಕರು ತಮ್ಮ ವಿಮಾನಗಳ ನವೀಕರಣಗಳನ್ನು ಅಧಿಕೃತ ಮಾರ್ಗಗಳ ಮೂಲಕ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಿ, ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಹಾಗೂ ಅಗತ್ಯ ಪ್ರಕ್ರಿಯೆಗಳಿಗೆ ಹೆಚ್ಚುವರಿ ಸಮಯವನ್ನು ಮೀಸಲಿಡುವಂತೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಸಲಹೆ ನೀಡಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಸಾಮಾನ್ಯವಾಗಿ ಮುಂದುವರೆದಿವೆ ಎಂದು ದೆಹಲಿ ವಿಮಾನ ನಿಲ್ದಾಣದ ಪ್ರಾಧಿಕಾರ ತಿಳಿಸಿದೆ. ಆದರೆ, ಪ್ರಯಾಣಿಕರು ನವೀಕರಿಸಿದ ವಿಮಾನ ವೇಳಾಪಟ್ಟಿಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚಿಸುವಂತೆ ಸಲಹೆ ನೀಡಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಾಮಾನ್ಯ ರೀತಿಯಲ್ಲಿ ಮುಂದುವರೆದಿವೆ. ನವೀಕರಿಸಿದ ವಿಮಾನ ವೇಳಾಪಟ್ಟಿಗಳಿಗಾಗಿ, ದಯವಿಟ್ಟು ನಿಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಅಥವಾ ಅಧಿಕೃತ ವಿಮಾನ ನಿಲ್ದಾಣದ ವೆಬ್‌ಸೈಟ್‌ಗೆ ಭೇಟಿ ನೀಡಿ. ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆಹ್ಲಾದಕರ ಪ್ರಯಾಣವನ್ನು ನಾವು ಬಯಸುತ್ತೇವೆ ಎಂದು ಎಕ್ಸ್‌ನಲ್ಲಿ ತಿಳಿಸಲಾಗಿದೆ.

