ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ೧೮ನೇ ಮೆಟ್ಟಿಲು ಹತ್ತಲು ಪೊಲೀಸರು ವಿಶೇಷ ಸೂಚನೆಗಳನ್ನು ನೀಡಿದ್ದಾರೆ.
ಮೆಟ್ಟಿಲುಗಳನ್ನು ಹತ್ತುವಾಗ ಅಯ್ಯಪ್ಪ ಭಕ್ತರು ಸಾಧ್ಯವಾದಷ್ಟು ಬದಿಗಳಲ್ಲಿ ಚಲಿಸುವಂತೆ ಸೂಚಿಸಲಾಗಿದೆ. ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳಿಗೆ ಭಕ್ತರನ್ನು ನಿಯಂತ್ರಿಸಲು ಸುಲಭವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸನ್ನಿಧಾನದ ವಿಶೇಷ ಅಧಿಕಾರಿ ಪಿ.ಬಾಲಕೃಷ್ಣನ್ ನಾಯರ್ ತಿಳಿಸಿದ್ದಾರೆ.
ಮೆಟ್ಟಿಲುಗಳಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ಮಲೆಯಾಳ ಸೇರಿದಂತೆ ಐದು ದಕ್ಷಿಣ ಭಾರತೀಯ ಭಾಷೆಗಳಲ್ಲಿ ಮಾಹಿತಿಗಳನ್ನು ನೀಡುತ್ತಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ದೇವರ ದರುಶನದ ವೇಳೆ ಮೊಬೈಲ್ ಪೋನ್ ಬಳಕೆಯ ಮೇಲೂ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ.
೧೮ನೇ ಮೆಟ್ಟಿಲು, ಸೋಪಾನಂ, ದೇವಾಲಯದ ಆವರಣದೊಳಗೆ ಮತ್ತು ಮಾಳಿಗಪ್ಪುರಂ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಬಳಸುವುದು ಅಥವಾ ಪೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

