Monday, December 22, 2025

ಪೋಲಿಯೋ ಓಡಿಸಲು ಒಂದಾದ ಬೆಂಗಳೂರು: ಮೊದಲ ದಿನವೇ ದಾಖಲೆ ಬರೆದ ಲಸಿಕಾ ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವು ಭರ್ಜರಿ ಯಶಸ್ಸು ಕಂಡಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಮ್ಮಿಕೊಂಡಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಮೊದಲ ದಿನವೇ ಶೇ. 95 ರಷ್ಟು ಗುರಿ ತಲುಪಲಾಗಿದ್ದು, ಒಟ್ಟು 10.77 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ.

ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣ, ಮೆಟ್ರೋ ಸ್ಟೇಷನ್‌ಗಳು, ಮಾಲ್‌ಗಳು ಮತ್ತು ಉದ್ಯಾನವನಗಳಲ್ಲಿ ಸಂಚಾರಿ ತಂಡಗಳು ಸಕ್ರಿಯವಾಗಿದ್ದವು. ಇದರೊಂದಿಗೆ ನಮ್ಮ ಕ್ಲಿನಿಕ್, ಅಂಗನವಾಡಿ ಹಾಗೂ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಒಟ್ಟು 4,452 ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಯಿತು.

ಅಂಕಿ-ಅಂಶಗಳ ನೋಟ:

ಒಟ್ಟು ಗುರಿ: 11,34,988 ಮಕ್ಕಳು.

ಲಸಿಕೆ ಪಡೆದವರು: 10,77,134 ಮಕ್ಕಳು.

ಕೇಂದ್ರಗಳಲ್ಲಿ ಲಸಿಕೆ ಪಡೆದವರು: 9,70,557 ಮಕ್ಕಳು.

ನಿಲ್ದಾಣ/ಸಾರ್ವಜನಿಕ ಸ್ಥಳಗಳಲ್ಲಿ: 1,00,746 ಮಕ್ಕಳು.

ರೋಟರಿ ಕ್ಲಬ್‌, ಲಯನ್ಸ್ ಕ್ಲಬ್‌, WHO ಮತ್ತು ಯುನಿಸೆಫ್ ಸಹಯೋಗದಲ್ಲಿ ಈ ಅಭಿಯಾನ ಯಶಸ್ವಿಯಾಗಿದೆ.

ಬಾಕಿ ಉಳಿದ ಮಕ್ಕಳಿಗೆ ಮನೆ-ಮನೆ ಭೇಟಿ: ಇನ್ನೂ ಲಸಿಕೆ ಪಡೆಯದ ಸುಮಾರು 66,796 ಮಕ್ಕಳನ್ನು ತಲುಪಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಮಂಗಳವಾರದಿಂದ ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ. ಈ ಅಭಿಯಾನವು ಡಿಸೆಂಬರ್ 24ರವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!