ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜಕೀಯದಲ್ಲಿ ಧಾರ್ಮಿಕ ಮೂಲಭೂತವಾದ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿರುವ ಸಂದರ್ಭದಲ್ಲೇ, ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಸಿದ್ಧಾಂತವು ಅಮೆರಿಕದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಇಸ್ಲಾಮಿಸ್ಟ್ ಚಳವಳಿ ಇನ್ನು ವಿದೇಶಗಳಿಗೆ ಮಾತ್ರ ಸೀಮಿತವಿಲ್ಲದೆ, ಅಮೆರಿಕದ ಒಳಗೆಯೇ ವ್ಯಾಪಿಸುತ್ತಿರುವುದು ಆತಂಕಕಾರಿ ಸಂಗತಿ ಎಂದು ಗಬ್ಬಾರ್ಡ್ ಅಭಿಪ್ರಾಯಪಟ್ಟರು. ಜಾಗತಿಕ ಕ್ಯಾಲಿಫೇಟ್ ಹಾಗೂ ಷರಿಯಾ ಆಧಾರಿತ ಆಡಳಿತವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವ ರಾಜಕೀಯ ಕಾರ್ಯಸೂಚಿಯೇ ಇದರ ಹಿಂದೆ ಇದೆ ಎಂದು ಅವರು ಹೇಳಿದರು. ಈ ಸಿದ್ಧಾಂತವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದ್ದು, ಸಮಾಜದ ಸ್ಥಿರತೆಯನ್ನು ಹದಗೆಡಿಸುತ್ತದೆ ಎಂಬುದಾಗಿ ಎಚ್ಚರಿಸಿದರು.
ಆಸ್ಟ್ರೇಲಿಯಾದಲ್ಲಿ ನಡೆದ ಇತ್ತೀಚಿನ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ನಿಯಂತ್ರಣವಿಲ್ಲದ ಮೂಲಭೂತವಾದಿ ಒಳನುಸುಳುವಿಕೆಯ ಪರಿಣಾಮವೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದರು. ಅಮೆರಿಕ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ, ಯುರೋಪ್ ಮತ್ತು ಆಸ್ಟ್ರೇಲಿಯಾದಂತೆ ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಗಬ್ಬಾರ್ಡ್ ಹೇಳಿದರು.

