ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಗರ್ಭಿಣಿ ಯುವತಿಯೊಬ್ಬಳು ಬಲಿಯಾಗಿರುವ ಬೆಚ್ಚಿಬೀಳಿಸುವ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಮಾನ್ಯ ಎಂಬ ಯುವತಿಯನ್ನು ಆಕೆಯ ತಂದೆ ಮತ್ತು ಸಂಬಂಧಿಕರೇ ಸೇರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಗ್ರಾಮದ ವಿವೇಕಾನಂದ ಮತ್ತು ಮಾನ್ಯ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮಾನ್ಯ ಮನೆಯವರ ತೀವ್ರ ವಿರೋಧವಿತ್ತು. “ವಿವೇಕಾನಂದನನ್ನೇ ಮದುವೆಯಾಗುವುದು” ಎಂದು ಪಟ್ಟು ಹಿಡಿದಿದ್ದ ಮಾನ್ಯ, ಕೊನೆಗೆ ಮನೆಯವರನ್ನು ಎದುರಿಸಿ ಆತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಪ್ರಾಣ ಭಯದಿಂದಾಗಿ ಈ ದಂಪತಿ ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದರು.
ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬಗಳ ನಡುವೆ ಸಂಧಾನ ನಡೆದಿತ್ತು. ಎಲ್ಲವೂ ಸುಸೂತ್ರವಾಗಿದೆ ಎಂದು ನಂಬಿದ್ದ ದಂಪತಿ, ಮದುವೆಯಾದ 7 ತಿಂಗಳ ಬಳಿಕ ಡಿಸೆಂಬರ್ 8 ರಂದು ಗ್ರಾಮಕ್ಕೆ ಮರಳಿದ್ದರು. ಮಾನ್ಯ ಗರ್ಭಿಣಿಯಾಗಿದ್ದು, ಹೊಸ ಜೀವನದ ಕನಸು ಹೊತ್ತು ಗಂಡನ ಮನೆಗೆ ಬಂದಿದ್ದಳು.
ಆದರೆ, ಮಗಳು ದಲಿತನ ಕೈಹಿಡಿದಿದ್ದನ್ನು ಮರ್ಯಾದೆಯ ಪ್ರಶ್ನೆಯನ್ನಾಗಿಸಿಕೊಂಡಿದ್ದ ತಂದೆ ಪ್ರಕಾಶಗೌಡ ಪಾಟೀಲ್ ಸುಮ್ಮನಿರಲಿಲ್ಲ. ಭಾನುವಾರ ಸಂಜೆ ತನ್ನ ಸಂಬಂಧಿಕರಾದ ವೀರನಗೌಡ ಮತ್ತು ಅರುಣ್ ಗೌಡ ಅವರೊಂದಿಗೆ ವಿವೇಕಾನಂದನ ಮನೆಗೆ ನುಗ್ಗಿದ ತಂದೆ, ಅಕ್ಷರಶಃ ರಕ್ತಪಾತ ನಡೆಸಿದ್ದಾರೆ.
ಆರೋಪಿಗಳು ತಂದಿದ್ದ ಕೊಡಲಿ ಮತ್ತು ತಲ್ವಾರ್‌ನಿಂದ ಮಾನ್ಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಡ್ಡ ಬಂದ ಪತಿ ವಿವೇಕಾನಂದ ಹಾಗೂ ಆತನ ತಂದೆ-ತಾಯಿಯ ಮೇಲೆಯೂ ಮಾರಣಾಂತಿಕ ದಾಳಿ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಾನ್ಯಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಘಟನೆಯ ನಂತರ ಪ್ರಕಾಶಗೌಡ ಪಾಟೀಲ್ ಮತ್ತು ತಂಡ ಪರಾರಿಯಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

