ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೂಪಿಸಿರುವ ‘ಟನಲ್ ರಸ್ತೆ’ ಯೋಜನೆ ಈಗ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ರಾಷ್ಟ್ರಮಟ್ಟದಲ್ಲಿ ಅದಾನಿ ಗ್ರೂಪ್ ವಿರುದ್ಧ ಸಮರ ಸಾರುತ್ತಿರುವ ಕಾಂಗ್ರೆಸ್‌ಗೆ, ಈಗ ರಾಜ್ಯದಲ್ಲಿ ಅದೇ ಗ್ರೂಪ್‌ಗೆ ಸಾವಿರಾರು ಕೋಟಿ ರೂ. ಮೊತ್ತದ ಟೆಂಡರ್ ನೀಡಬೇಕಾದ ಮುಜುಗರದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ 16.75 ಕಿ.ಮೀ ಉದ್ದದ ಬೃಹತ್ ಟನಲ್ ರಸ್ತೆ ಯೋಜನೆಗಾಗಿ ಜಿಬಿಎ ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಗ್ರೂಪ್ಸ್ ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡುವ ಮೂಲಕ ಮುಂಚೂಣಿಯಲ್ಲಿದೆ. ಎರಡು ಪ್ಯಾಕೇಜ್‌ಗಳಲ್ಲಿ ನಡೆದ ಈ ಬಿಡ್ಡಿಂಗ್‌ನಲ್ಲಿ ಹೈದರಾಬಾದ್ ಮೂಲದ ವಿಶ್ವ ಸಮುದ್ರ ಗ್ರೂಪ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಯೋಜನೆಯ ವೆಚ್ಚದ ವಿಚಾರದಲ್ಲಿ ಸರ್ಕಾರಕ್ಕೆ ಈಗ ದೊಡ್ಡ ಸವಾಲು ಎದುರಾಗಿದೆ.
ಸರ್ಕಾರದ ಅಂದಾಜು ಮೊತ್ತ: 17,698 ಕೋಟಿ ರೂ.
ಅದಾನಿ ಗ್ರೂಪ್ ಬಿಡ್ ಮಾಡಿದ ಮೊತ್ತ: 22,267 ಕೋಟಿ ರೂ.
ಸರ್ಕಾರದ ಅಂದಾಜಿಗಿಂತ ಸುಮಾರು 4,569 ಕೋಟಿ ರೂ. (ಶೇ. 24ರಷ್ಟು) ಅಧಿಕ ಹಣವನ್ನು ಅದಾನಿ ಗ್ರೂಪ್ ಬೇಡಿಕೆಯಿಟ್ಟಿದೆ.
ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಅದಾನಿ ಗ್ರೂಪ್ ಅನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಆದರೆ ಈಗ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಸಾವಿರಾರು ಕೋಟಿ ರೂಪಾಯಿಯ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅದಾನಿ ಸಂಸ್ಥೆಗೆ ವಹಿಸಿಕೊಟ್ಟರೆ, ಅದು ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗುವ ಸಾಧ್ಯತೆಯಿದೆ.

