ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ, ರೂಪಾಯಿ ಮೌಲ್ಯದ ಕುಸಿತ ಮತ್ತು ತೆರಿಗೆ ನೀತಿಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಹೊಸ ಇತಿಹಾಸ ಬರೆದಿದೆ. ಕಳೆದ ಕೆಲವು ದಿನಗಳಿಂದ ಸಣ್ಣಪುಟ್ಟ ಏರಿಳಿತ ಕಾಣುತ್ತಿದ್ದ ಲೋಹದ ದರ ಇಂದು ದಿಢೀರನೆ ಏರಿಕೆಯಾಗುವ ಮೂಲಕ ಗ್ರಾಹಕರನ್ನು ಕಂಗಾಲಾಗಿಸಿದೆ.
ಸಾಮಾನ್ಯವಾಗಿ ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ಇಂದು 1,24,000 ರೂಪಾಯಿ ತಲುಪಿದ್ದರೆ, ಶುದ್ಧ ರೂಪದ 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ಬರೋಬ್ಬರಿ 1,35,280 ರೂಪಾಯಿಗೆ ಏರಿಕೆಯಾಗಿದೆ.
ಚಿನ್ನದ ದಾರಿ ಹಿಡಿದಿರುವ ಬೆಳ್ಳಿಯೂ ಸಹ ಕೈಗಾರಿಕಾ ಬೇಡಿಕೆಯಿಂದಾಗಿ ಬೆಚ್ಚಿಬೀಳಿಸುವ ದರದಲ್ಲಿದೆ. ಪ್ರತಿ ಕೆಜಿ (1000 ಗ್ರಾಂ) ಬೆಳ್ಳಿಯ ಬೆಲೆ ಇಂದು 2,19,000 ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ಒಂದೆಡೆ ಆಭರಣ ಖರೀದಿಸಲು ಸನ್ನದ್ಧರಾಗಿದ್ದ ಮಧ್ಯಮ ವರ್ಗದ ಜನರು ಈ ದರ ನೋಡಿ ಕಳವಳಗೊಂಡಿದ್ದರೆ, ಮತ್ತೊಂದೆಡೆ ಹೂಡಿಕೆದಾರರು ಚಿನ್ನವನ್ನು ‘ಸುರಕ್ಷಿತ ಹೂಡಿಕೆ’ ಎಂದು ನಂಬಿ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ. ಜಾಗತಿಕ ಪರಿಸ್ಥಿತಿಗಳು ಹೀಗೆಯೇ ಮುಂದುವರೆದರೆ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

