ನಾವೆಲ್ಲರೂ ಬೆಳೆಯುತ್ತೇವೆ, ಆದರೆ ಎಲ್ಲರೂ ‘ಪ್ರಬುದ್ಧರಾಗುವುದಿಲ್ಲ’. ಪ್ರಬುದ್ಧತೆ ಅಥವಾ ಮೆಚ್ಯೂರಿಟಿ ಎಂಬುದು ಅಂಗಡಿಯಲ್ಲಿ ಸಿಗುವ ವಸ್ತುವಲ್ಲ, ಅದು ಅನುಭವಗಳ ಒಲೆಯಲ್ಲಿ ಬೆಂದ ಹದವಾದ ಮನಸ್ಥಿತಿ. ಪ್ರಬುದ್ಧ ವ್ಯಕ್ತಿ ಎಂದರೆ ಗಂಭೀರವಾಗಿ ಮುಖ ಇಟ್ಟುಕೊಂಡಿರುವವನಲ್ಲ, ಬದಲಾಗಿ ಸನ್ನಿವೇಶಗಳಿಗೆ ಸರಿಯಾಗಿ ಸ್ಪಂದಿಸುವ ಕಲೆ ಕರಗತ ಮಾಡಿಕೊಂಡವನು.
ಸಾಮಾನ್ಯವಾಗಿ ಅರೆಬರೆ ತಿಳುವಳಿಕೆ ಇರುವವರು ತಾವು ಹೇಳಿದ್ದೇ ಸರಿ ಎಂದು ವಾದಿಸುತ್ತಾರೆ. ಆದರೆ ಪ್ರಬುದ್ಧ ವ್ಯಕ್ತಿಗೆ ತಿಳಿದಿರುತ್ತದೆ ಎಲ್ಲಾ ವಾದಗಳಲ್ಲೂ ಗೆಲ್ಲುವುದು ಮುಖ್ಯವಲ್ಲ ಎಂದು. ಯಾರಾದರೂ ಅನಗತ್ಯವಾಗಿ ವಾದಕ್ಕೆ ಇಳಿದಾಗ, ಅವರು ಕಿರುಚಾಡುವ ಬದಲು ಒಂದು ಸಣ್ಣ ನಗು ಬೀರಿ ಅಲ್ಲಿಂದ ಸರಿದು ಹೋಗುತ್ತಾರೆ. ಅವರಿಗೆ ತಮ್ಮ ‘ಮಾನಸಿಕ ಶಾಂತಿ’ ಎಲ್ಲಕ್ಕಿಂತ ದೊಡ್ಡದು.
ಯಾರಾದರೂ ನಮ್ಮನ್ನು ವಿಮರ್ಶಿಸಿದಾಗ ಅಥವಾ ಟೀಕಿಸಿದಾಗ ಕೋಪ ಬರುವುದು ಸಹಜ. ಆದರೆ ಮೆಚ್ಯೂರ್ಡ್ ಆದವರು ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಆ ಟೀಕೆಯಲ್ಲಿ ಸತ್ಯವಿದ್ದರೆ ತಿದ್ದಿಕೊಳ್ಳುತ್ತಾರೆ, ಸುಳ್ಳಾಗಿದ್ದರೆ ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಅವರು ಎದುರಾಳಿಯ ಮಾತಿಗೆ ಪ್ರತಿಕ್ರಿಯಿಸುವ ಬದಲು ಯೋಚಿಸಿ ಸ್ಪಂದಿಸುತ್ತಾರೆ.
ತಪ್ಪಾದಾಗ ಇತರರ ಮೇಲೆ ಗೂಬೆ ಕೂರಿಸುವುದು ಸುಲಭ. ಆದರೆ ಪ್ರಬುದ್ಧ ವ್ಯಕ್ತಿ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಧೈರ್ಯ ತೋರುತ್ತಾನೆ. ಸೋಲನ್ನು ಒಂದು ಪಾಠವೆಂದು ಭಾವಿಸುತ್ತಾರೆಯೇ ಹೊರತು, ಅದನ್ನೇ ಹಿಡಿದು ಅಳುತ್ತಾ ಕೂರುವುದಿಲ್ಲ.
ಸಂಬಂಧಗಳಲ್ಲಿ ಸಣ್ಣಪುಟ್ಟ ಜಗಳಗಳಾದಾಗ “ಈಗೋ” ಬಿಟ್ಟು ಮೊದಲು ಮಾತನಾಡಿಸುವುದು ಪ್ರಬುದ್ಧತೆಯ ಲಕ್ಷಣ. ತಪ್ಪು ಯಾರದ್ದೇ ಇರಲಿ, ಸಂಬಂಧವನ್ನು ಉಳಿಸಿಕೊಳ್ಳಲು ಅವರು ಒಂದು ಹೆಜ್ಜೆ ಹಿಂದೆ ಸರಿಯಲು ಹಿಂಜರಿಯುವುದಿಲ್ಲ.
ನೆನಪಿಡಿ.. ಸಣ್ಣ ವಿಷಯಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿದ ದಿನ ನೀವು ನಿಜವಾಗಿಯೂ ಪ್ರಬುದ್ಧರಾಗಲು ಶುರುಮಾಡಿದ್ದೀರಿ ಎಂದರ್ಥ.

