Monday, December 22, 2025

ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ: ರಫ್ತು ಅವೃದ್ಧಿಗೆ ಉತ್ತೇಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆರ್ಥಿಕ ಸಹಕಾರಕ್ಕೆ ಹೊಸ ಆಯಾಮ ನೀಡುವ ಮಹತ್ವದ ಬೆಳವಣಿಗೆಯಲ್ಲಿ, ಎರಡೂ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನಡುವೆ ನಡೆದ ದೂರವಾಣಿ ಸಂಭಾಷಣೆಯ ವೇಳೆ ಈ ಐತಿಹಾಸಿಕ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಲಾಗಿದೆ. 2025ರ ಮಾರ್ಚ್‌ನಲ್ಲಿ ಆರಂಭವಾದ ಈ ಮಾತುಕತೆಗಳು ಕೇವಲ ಒಂಬತ್ತು ತಿಂಗಳಲ್ಲೇ ಅಂತ್ಯಗೊಂಡಿರುವುದು, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಗಾಢ ರಾಜಕೀಯ ಬದ್ಧತೆ ಹಾಗೂ ಪರಸ್ಪರ ಆರ್ಥಿಕ ನಂಬಿಕೆಯನ್ನು ತೋರಿಸುತ್ತದೆ.

ಒಪ್ಪಂದದಂತೆ, ಭಾರತಕ್ಕೆ ರಫ್ತಾಗುವ ನ್ಯೂಜಿಲೆಂಡ್‌ನ ಶೇ.95ರಷ್ಟು ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದ್ದು, ಕೆಲವೊಂದರ ಮೇಲೆ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಇದರ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ ರಫ್ತು ವೃದ್ಧಿಗೆ ದೊಡ್ಡ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿದ್ದು, ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಮಹತ್ವದ ಹೂಡಿಕೆ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಒಪ್ಪಂದವು ವ್ಯಾಪಾರ, ಹೂಡಿಕೆ, ನಾವೀನ್ಯತೆ ಮತ್ತು ಜನ ಸಂಪರ್ಕವನ್ನು ಬಲಪಡಿಸುವುದರೊಂದಿಗೆ, ಭಾರತೀಯ ಉದ್ಯಮಗಳು, ರೈತರು ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

error: Content is protected !!