ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮಲ್ಕನ್ ರೈಲ್ವೆ ಕ್ರಾಸಿಂಗ್‌ನಲ್ಲಿ ಲೋಕೋ ಪೈಲಟ್ ಒಬ್ಬರು ಸಿಗರೇಟ್ ಖರೀದಿಗಾಗಿ ಸುಮಾರು 10 ನಿಮಿಷಗಳ ಕಾಲ ಸರಕು ರೈಲನ್ನು ನಿಲ್ಲಿಸಿದ್ದಾನೆ.
ರೈಲು ನಿಲುಗಡೆಯಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ರೈಲ್ವೆ ಅಧಿಕಾರಿಗಳು ಈ ನಿಲುಗಡೆಯ ಹಿಂದಿನ ಕಾರಣಗಳನ್ನು ಕಂಡು ಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ರಾಯ್‌ಬರೇಲಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಲ್ಕನ್ ಲೆವೆಲ್ ಕ್ರಾಸಿಂಗ್‌ನಲ್ಲಿ ಉದ್ದವಾದ ಸರಕು ಸಾಗಣೆ ರೈಲು ನಿಂತಿರುವುದನ್ನು ಕಂಡು ಬಂದಿದೆ.
ಲೋಕೋ ಪೈಲಟ್ ರೈಲಿನಿಂದ ಇಳಿದು ಹಳಿಗಳನ್ನು ದಾಟುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಲೋಕೋ ಪೈಲಟ್ ಹತ್ತಿರದ ಅಂಗಡಿಯಿಂದ ಸಿಗರೇಟ್ ಖರೀದಿಸಲು ಹೊರಬಂದಿದ್ದ ಎಂದು ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ಸ್ಥಳೀಯ ಪ್ರಯಾಣಿಕರು ವಿಳಂಬದ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದು, ಕ್ರಾಸಿಂಗ್‌ನಲ್ಲಿ ಇಂತಹ ನಿಲುಗಡೆಗಳು ಆಗಾಗ ಸಂಭವಿಸುತ್ತವೆ ಎಂದು ಹೇಳಿಕೊಂಡಿದ್ದಾರೆ. ಹಲವು ಸ್ಥಳೀಯರು ಲೋಕೋ ಪೈಲಟ್ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.

