Monday, December 22, 2025

ಗಲ್ಫ್ ರಾಷ್ಟ್ರಗಳ ಎಚ್ಚರಿಕೆಗೆ ಮಣಿದ ಪಾಕಿಸ್ತಾನ: ಇನ್ಮುಂದೆ ಭಿಕ್ಷಕರು, ದಾಖಲೆ ಇಲ್ಲದವರಿಗೆ ವಿದೇಶಕ್ಕೆ ಹೋಗಲು ಅನುಮತಿ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಸಾವಿರಾರು ಪಾಕಿಸ್ತಾನಿಗಳನ್ನು ಸೌದಿ ಅರೇಬಿಯಾ ಮತ್ತು ಯುಎಇಗಳಿಂದ (UAE) ಗಡೀಪಾರು ಮಾಡಲಾಗಿದೆ.

ಇದರ ಬೆನ್ನಲ್ಲೇ ವೃತ್ತಿಪರ ಭಿಕ್ಷುಕರು, ಸರಿಯಾದ ದಾಖಲೆಗಳು ಇಲ್ಲದವರಿಗೆ ಇನ್ನು ಮುಂದೆ ವಿದೇಶಕ್ಕೆ ಹೋಗಲು ಅನುಮತಿ ಇಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.

ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ಸಾವಿರಾರು ಪಾಕಿಸ್ತಾನಿಗಳನ್ನು ಭಿಕ್ಷಾಟನೆಗೆ ಸಂಬಂಧಿಸಿದ ಅಪರಾಧಗಳಿಗಾಗಿ ಗಡಿಪಾರು ಮಾಡಲಾಗಿದೆ. ಇದು ಮತ್ತೆ ಪುನರಾವರ್ತನೆಯಾದರೆ ರಾಷ್ಟ್ರವನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಸಿದೆ. ಇದರಿಂದ ಭವಿಷ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಈ ರಾಷ್ಟ್ರಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಇದೀಗ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ವೃತ್ತಿಪರ ಭಿಕ್ಷುಕರು ಮತ್ತು ಸರಿಯಾದ ಪ್ರಯಾಣ ದಾಖಲೆಗಳು ಇಲ್ಲದವರನ್ನು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಘನತೆ ಕಾಪಾಡಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಖ್ವಿ ತಿಳಿಸಿದ್ದಾರೆ.

ಅಕ್ರಮ ಭಿಕ್ಷಾಟನೆ, ವೀಸಾ ನಿಯಮ ಉಲ್ಲಂಘನೆ, ದಾಖಲೆ ವಂಚನೆಯಿಂದಾಗಿ ಅನೇಕ ಪಾಕಿಸ್ತಾನಿಗಳನ್ನು ವಿದೇಶಗಳಲ್ಲಿ ಗಡೀಪಾರು ಮಾಡುವುದು, ಬಂಧಿಸುತ್ತಿರುವುದರಿಂದ ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡಿದೆ. ವಿದೇಶಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಸಂಘಟಿತ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಲ್ಲಿ ಪಾಕಿಸ್ತಾನಿಯರಿಗೆ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ.

ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆಯು ಕಳೆದ ವಾರ ನೀಡಿರುವ ಮಾಹಿತಿ ಪ್ರಕಾರ ಅಕ್ರಮ ಪ್ರಯಾಣದ ಶಂಕೆ ಮೇರೆಗೆ ಈ ವರ್ಷ 66,000ಕ್ಕೂ ಹೆಚ್ಚು ಪ್ರಯಾಣಿಕರು ದೇಶದಿಂದ ಹೊರಗೆ ಹೋಗದಂತೆ ತಡೆಯಲಾಗಿದೆ ಎಂದು ತಿಳಿಸಿತ್ತು. ಇನ್ನು ಅಕ್ರಮ ವಲಸೆಯ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳುತ್ತಿರುವ ಗಲ್ಫ್ ರಾಷ್ಟ್ರಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿಯರನ್ನು ಗಡಿಪಾರು ಮಾಡಿರುವುದಾಗಿ ತಿಳಿಸಿದೆ.

error: Content is protected !!