Monday, December 22, 2025

ಬುಲಂದ್‌ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಐದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬುಲಂದ್‌ಶಹರ್ NH-91ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಐದು ಅಪರಾಧಿಗಳಿಗೆ ಸೋಮವಾರ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 1.81 ಲಕ್ಷ ರೂ. ದಂಡ ವಿಧಿಸಿದೆ.

2016 ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬುಲಂದ್‌ಶಹರ್‌ ಬಳಿ ಮಹಿಳೆ ಮತ್ತು ಆಕೆಯ ಹದಿಮೂರು ವರ್ಷದ ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಜನರನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಸಲೀಂ ಬವಾರಿಯಾ 2019 ರಲ್ಲಿ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದರೆ, ಇತರ ಇಬ್ಬರು ಆರೋಪಿಗಳನ್ನು STF ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾಗಿದ್ದರು.

ಪ್ರಕರಣವನ್ನು ಸಿಬಿಐಗೆ ವಹಿಸಿದ ನಂತರ, ತನಿಖೆಯ ಸಮಯದಲ್ಲಿ, ಮೂವರು ಆರೋಪಿಗಳು ನಿರಪರಾಧಿಗಳು ಎಂದು ಅವರ ಹೆಸರನ್ನು ಕೈಬಿಡಲಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ(POCSO) ಓಂ ಪ್ರಕಾಶ್ III ಅವರು, ಇಂದು ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಒಟ್ಟು ದಂಡದ ಮೊತ್ತವನ್ನು ಅತ್ಯಾಚಾರದಿಂದ ಬದುಕುಳಿದ ಇಬ್ಬರ ನಡುವೆ ಸಮಾನವಾಗಿ ಹಂಚಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಈ ಭಯಾನಕ ಘಟನೆ ಜುಲೈ 29, 2016 ರಂದು ನೋಯ್ಡಾದಿಂದ ಶಹಜಹಾನ್‌ಪುರಕ್ಕೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದಿದೆ.

ಬುಲಂದ್‌ಶಹರ್ ಕೊಟ್ವಾಲಿ ದೇಹತ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-91 ರಲ್ಲಿ ದೋಸ್ತಪುರ ಗ್ರಾಮದ ಬಳಿ ಸಂತ್ರಸ್ತ ಮಹಿಳೆ ಮತ್ತು ಆಕೆಯ ಮಗಳು ತಮ್ಮ ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು, ಮಹಿಳೆ ಮತ್ತು ಆಕೆಯ ಮಗಳನ್ನು ಕಾರಿನಿಂದ ಹೊರಗೆಳೆದು ಅತ್ಯಾಚಾರ ಎಸಗಿದ್ದಲ್ಲದೇ ಅವರ ಬಳಿ ಇದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದರು.

error: Content is protected !!